ಬೆಂಗಳೂರು:ರಾಜ್ಯ ಸರ್ಕಾರಿ ನೌಕರರಲ್ಲಿ ಭಾಷಾಭಿಮಾನ ಮೂಡಿಸಲು ಮತ್ತು ಆಡಳಿತದಲ್ಲಿ ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯಲು ಜಾರಿಗೆ ತಂದ ‘ಕನ್ನಡದ ಕೊರಳುದಾರ’ (ಲidentity card lanyard) ಈಗ ಸಚಿವಾಲಯ ಹಾಗೂ ಬಹುಮಹಡಿ ಕಟ್ಟಡಗಳ ಭದ್ರತೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ! ಭಾಷಾ ಪ್ರೇಮದ ಸಂಕೇತವಾಗಿದ್ದ ಈ ಕೆಂಪು-ಹಳದಿ ಪಟ್ಟಿಗಳು ಮುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರೀಕರಣಗೊಂಡು, ಅನಧಿಕೃತ ವ್ಯಕ್ತಿಗಳ ಕೈ ಸೇರುತ್ತಿರುವುದು ಇಲಾಖಾ ಮಟ್ಟದಲ್ಲಿ ತೀವ್ರ ಕಳವಳ ಮೂಡಿಸಿದೆ.
ಅಭಿಯಾನದ ಆಶಯಕ್ಕೆ ವಾಣಿಜ್ಯದ ಪೆಟ್ಟು!
“ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಐತಿಹಾಸಿಕ ಅಭಿಯಾನದ ಅಡಿಯಲ್ಲಿ 2024ರ ಆಗಸ್ಟ್‌ನಲ್ಲಿ ಹೊರಡಿಸಲಾದ ಸುತ್ತೋಲೆಯಂತೆ ಎಲ್ಲಾ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣದ ಕೊರಳುದಾರ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಇದು ಸಚಿವಾಲಯದ ನೌಕರರಿಗೆ ಹೆಮ್ಮೆಯ ಸಂಕೇತವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಖಾಸಗಿ ವ್ಯಾಪಾರಿಗಳು ಲಾಭದ ಆಸೆಗೆ ಬಿದ್ದು ಈ ನಿಗದಿತ ಬಣ್ಣದ ಕೊರಳುದಾರಗಳನ್ನು ಬಹಿರಂಗವಾಗಿ ಮಾರಾಟ ಮಾಡುತ್ತಿದ್ದಾರೆ.
ಐಡಿ ಕಾರ್ಡ್ ಇಲ್ಲದೇ ನುಸುಳುತ್ತಿದ್ದ ‘ಅನಾಮಧೇಯರು’:
ಈ ಮಾರುಕಟ್ಟೆ ಮುಕ್ತತೆಯನ್ನೇ ಬಂಡವಾಳ ಮಾಡಿಕೊಂಡ ಕೆಲವು ಜನಸಾಮಾನ್ಯರು ಮತ್ತು ದಲ್ಲಾಳಿಗಳು, ಕೇವಲ ಹಳದಿ-ಕೆಂಪು ಕೊರಳುದಾರವನ್ನು ಖರೀದಿಸಿ ಧರಿಸುತ್ತಿದ್ದರು. ದೂರದಿಂದ ನೋಡಲು ಇವರು ಸರ್ಕಾರಿ ನೌಕರರಂತೆ ಕಾಣುವುದರಿಂದ, ವಿಧಾನಸೌಧ ಅಥವಾ ಬಹುಮಹಡಿ ಕಟ್ಟಡಗಳ ಭದ್ರತಾ ಸಿಬ್ಬಂದಿ ಸಹ ಇವರನ್ನು ತಪಾಸಣೆ ಮಾಡದೆ ನೇರವಾಗಿ ಒಳಗೆ ಬಿಡುತ್ತಿದ್ದರು. ಇದನ್ನು ಬಳಸಿಕೊಂಡು ಸಚಿವಾಲಯದ ಒಳಗೆ ಅನಧಿಕೃತ ಪ್ರವೇಶಗಳು ಹೆಚ್ಚಾಗುತ್ತಿದ್ದವು ಎಂಬ ದೂರುಗಳು ಕೇಳಿಬಂದಿದ್ದವು.
ಕೇವಲ ಕೊರಳುದಾರ ಸಾಲದು, ‘ಕಾರ್ಡ್’ ತೋರಿಸಿ ಒಳಗೆ ಬನ್ನಿ!
ಈ ಗಂಭೀರ ಭದ್ರತಾ ಲೋಪವನ್ನು ತಡೆಯಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಈಗ ಎಚ್ಚೆತ್ತುಕೊಂಡಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಸಂದೀಪ್ ಬಿ.ಕೆ. ಅವರು ಕಟ್ಟುನಿಟ್ಟಿನ ಹೊಸ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಇನ್ನು ಮುಂದೆ ಯಾವುದೇ ಸರ್ಕಾರಿ ಕಚೇರಿಯ ಪ್ರವೇಶ ದ್ವಾರದಲ್ಲಿ ಕೇವಲ ಕೊರಳುದಾರದ ಬಣ್ಣವನ್ನು ನೋಡಿ ಸಾರಾಸಗಟಾಗಿ ಒಳಗೆ ಬಿಡುವಂತಿಲ್ಲ. ಬರುವ ಪ್ರತಿಯೊಬ್ಬರ ಇಲಾಖಾ ಗುರುತಿನ ಚೀಟಿಯನ್ನು (ID Card) ಭದ್ರತಾ ಸಿಬ್ಬಂದಿ ಹತ್ತಿರದಿಂದ, ಕಡ್ಡಾಯವಾಗಿ ಪರಿಶೀಲಿಸಬೇಕು. ಕಾರ್ಡ್ ಇಲ್ಲದಿದ್ದರೆ ಅಂತಹವರಿಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡಬಾರದು ಎಂದು ಹದ್ದಿನ ಕಣ್ಣಿಡಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

