ಬೆಂಗಳೂರು: ದೇಶದ ಪ್ರಮುಖ 7 ರೈಲ್ವೆ ಮಾರ್ಗಗಳನ್ನು ಚತುಷ್ಪಥಗೊಳಿಸುವ (ನಾಲ್ಕು ಹಳಿಗಳ ಮಾರ್ಗ) ಬೃಹತ್ ಯೋಜನೆಯಲ್ಲಿ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದನ್ನು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತೀವ್ರವಾಗಿ ಖಂಡಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈಲ್ವೆ ಯೋಜನೆಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯದ ವಿರುದ್ಧ ನಿರಂತರವಾಗಿ ಮಲತಾಯಿ ಧೋರಣೆ ತಳೆಯುತ್ತಿದ್ದು, ನಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಒಕ್ಕೊರಲಿನಿಂದ ಧ್ವನಿ ಎತ್ತಲಿದ್ದೇವೆ ಎಂದು ಎಚ್ಚರಿಸಿದ್ದಾರೆ.
ರಾಜ್ಯದ ಸಂಸದರಿದ್ದರೂ ನಿರಂತರ ನಿರ್ಲಕ್ಷ್ಯ:
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ದೇಶದ ಅತ್ಯಂತ ಜನದಟ್ಟಣೆ ಹಾಗೂ ಆರ್ಥಿಕ ಸಾಂದ್ರತೆಯ 7 ಪ್ರಮುಖ ರೈಲ್ವೆ ಕಾರಿಡಾರ್ಗಳನ್ನು ಚತುಷ್ಪಥಗೊಳಿಸುವ ಬೃಹತ್ ಘೋಷಣೆ ಮಾಡಿದ್ದಾರೆ. ದೆಹಲಿ, ಮುಂಬೈ, ಚೆನ್ನೈ, ಹೌರಾ ಮತ್ತು ಗುವಾಹಟಿ ನಗರಗಳನ್ನು ಸಂಪರ್ಕಿಸುವ ಈ ಯೋಜನೆ ಮೂಲಸೌಕರ್ಯ ಬಲಪಡಿಸಲು ಸ್ವಾಗತಾರ್ಹವೇ ಆದರೂ, ಇದರಲ್ಲಿ ದಕ್ಷಿಣ ಭಾರತದ ಪ್ರಮುಖ ಆರ್ಥಿಕ ಹಬ್ ಆಗಿರುವ ಬೆಂಗಳೂರು ಅಥವಾ ಕರ್ನಾಟಕದ ಮೂಲಕ ಹಾದುಹೋಗುವ ಒಂದೇ ಒಂದು ಮಾರ್ಗವನ್ನೂ ಸೇರಿಸಲಾಗಿಲ್ಲ. ರಾಜ್ಯದಿಂದಲೇ ಆಯ್ಕೆಯಾಗಿರುವ ವಿ. ಸೋಮಣ್ಣ ಅವರು ರೈಲ್ವೆ ರಾಜ್ಯ ಸಚಿವರಾಗಿದ್ದರೂ ಮತ್ತು ಬಿಜೆಪಿಯ 20ಕ್ಕೂ ಹೆಚ್ಚು ಸಂಸದರಿದ್ದರೂ ರಾಜ್ಯಕ್ಕೆ ಇಂತಹ ದೊಡ್ಡ ಅನ್ಯಾಯ ನಡೆದಿರುವುದು ಅತ್ಯಂತ ಖಂಡನೀಯ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.
ಮನವಿಗಳಿಗೆ ಸಿಗದ ಸ್ಪಂದನೆ, ಆರ್ಥಿಕತೆಗೆ ಹಿನ್ನಡೆ:
ರಾಜ್ಯ ಸರ್ಕಾರವು ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ 50:50 ಅನುಪಾತದಲ್ಲಿ ವೆಚ್ಚ ಹಂಚಿಕೆ ಮಾಡಿಕೊಳ್ಳಲು ಸಿದ್ಧವಿದ್ದರೂ ಕೇಂದ್ರದಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ತುಮಕೂರು–ದಾವಣಗೆರೆ ಏಕಪಥ ರೈಲು ಮಾರ್ಗವನ್ನು ಜೋಡಿಹಳಿಯನ್ನಾಗಿ ಪರಿವರ್ತಿಸುವಂತೆ ಹಲವು ಬಾರಿ ಮಾಡಿದ ಮನವಿಗಳು ಕಸದ ಬುಟ್ಟಿ ಸೇರಿವೆ. ಹೈಸ್ಪೀಡ್ ರೈಲು ಯೋಜನೆಗಳಲ್ಲೂ ಕರ್ನಾಟಕಕ್ಕೆ ಯಾವುದೇ ಆದ್ಯತೆ ದೊರೆತಿಲ್ಲ. ರಾಜ್ಯದ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಬೆಂಗಳೂರಿನಿಂದ ವಿಜಯಪುರ, ಹೊಸಪೇಟೆ, ಹುಬ್ಬಳ್ಳಿ, ಶಿವಮೊಗ್ಗ, ಕಲಬುರಗಿ, ಚೆನ್ನೈ ಹಾಗೂ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗಗಳನ್ನು ಹಂತ-ಹಂತವಾಗಿ ಚತುಷ್ಪಥಗೊಳಿಸುವುದು ಅನಿವಾರ್ಯವಾಗಿದೆ. ಕೇಂದ್ರದ ಈ ನಿರ್ಲಕ್ಷ್ಯದಿಂದಾಗಿ ರಾಜ್ಯದ ಆರ್ಥಿಕತೆಯ ವೇಗಕ್ಕೆ ಹಾಗೂ ಕೃಷಿ ಉತ್ಪನ್ನಗಳ ಸಾಗಣೆಗೆ ಭಾರೀ ಹಿನ್ನಡೆಯಾಗಲಿದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜಿಯಿಲ್ಲದ ಹೋರಾಟ – ಕೇಂದ್ರಕ್ಕೆ ಪತ್ರ:
ಇಂದು ಬೆಂಗಳೂರು ಮತ್ತು ಕರ್ನಾಟಕ ಇಡೀ ದೇಶದಲ್ಲೇ ಆರ್ಥಿಕ ಚಟುವಟಿಕೆಗಳು, ವಿಜ್ಞಾನ-ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ (R&D), ಭಾರೀ ಬಂಡವಾಳ ಹೂಡಿಕೆ ಹಾಗೂ ತಯಾರಿಕಾ ವಲಯದ ಪ್ರಮುಖ ಜಾಗತಿಕ ಕೇಂದ್ರವಾಗಿದೆ. ಇಂತಹ ಪ್ರಗತಿಪರ ರಾಜ್ಯಕ್ಕೆ ವಿಶ್ವದರ್ಜೆಯ ರೈಲ್ವೆ ಸೌಲಭ್ಯ ನೀಡುವುದು ದೇಶದ ಆರ್ಥಿಕ ಹಿತಾಸಕ್ತಿಯ ದೃಷ್ಟಿಯಿಂದ ಕೇಂದ್ರದ ಕರ್ತವ್ಯವೂ ಹೌದು. “ಕರ್ನಾಟಕವು ಯಾರ ಬಳಿಯೂ ವಿಶೇಷ ಸವಲತ್ತು ಅಥವಾ ಭಿಕ್ಷೆಯನ್ನು ಕೇಳುತ್ತಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ನಮಗೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ಮಾತ್ರ ಕೇಳುತ್ತಿದ್ದೇವೆ” ಎಂದು ಎಂ.ಬಿ. ಪಾಟೀಲ್ ಖಡಕ್ಕಾಗಿ ನುಡಿದಿದ್ದಾರೆ.
ಈ ಹಕ್ಕಿನ ವಿಚಾರದಲ್ಲಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ. ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಅಧಿಕೃತ ಪತ್ರ ಬರೆಯಲಾಗುವುದು. ಆ ಬಳಿಕ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಖುದ್ದಾಗಿ ಭೇಟಿ ಮಾಡಿ ಕರ್ನಾಟಕದ ಯೋಜನೆಗಳ ಅನುಷ್ಠಾನಕ್ಕೆ ಬಲವಾದ ಒತ್ತಡ ಹೇರಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

