ಬೆಂಗಳೂರು:ರಾಜ್ಯದಲ್ಲಿ ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ಹಮ್ಮಿಕೊಳ್ಳಲಾಗಿರುವ ‘ವಿಶೇಷ ತೀವ್ರ ಪರಿಷ್ಕರಣೆ-2026’ (SIR-2026) ಪ್ರಕ್ರಿಯೆಯ ಮಹತ್ವದ ಅಂಕಿ-ಅಂಶಗಳನ್ನು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ (CEO) ಕಚೇರಿ ಮಂಗಳವಾರ ಪ್ರಕಟಿಸಿದೆ. ಜೂನ್ 16, 2026 ರಲ್ಲಿದ್ದಂತೆ ರಾಜ್ಯದ ಒಟ್ಟು ಮತದಾರರ ಸಂಖ್ಯೆ 5,54,32,314 ಆಗಿದ್ದು, ಈ ಎಲ್ಲಾ ಮತದಾರರ ಮನೆ ಮನೆ ಗಣತಿ (House to House Enumeration) ಮತ್ತು ಡಿಜಿಟಲೀಕರಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
1.07 ಕೋಟಿ ಮತದಾರರು ASDDO ಗುರುತು:
ಮನೆ ಮನೆ ಸಮೀಕ್ಷೆಯ ವೇಳೆ ಅಧಿಕಾರಿಗಳು ಕೈಗೊಂಡ ಪರಿಶೀಲನೆಯಲ್ಲಿ ಒಟ್ಟು ಮತದಾರರ ಪೈಕಿ ಶೇ. 19.48 ರಷ್ಟು, ಅಂದರೆ ಬರೋಬ್ಬರಿ 1,07,96,415 ಮತದಾರರನ್ನು ASDDO (ಪತ್ತೆಯಾಗದ/ಗೈರುಹಾಜರು, ಶಾಶ್ವತವಾಗಿ ವಲಸೆ ಹೋದವರು, ಮರಣ ಹೊಂದಿದವರು ಮತ್ತು ಈಗಾಗಲೇ ನೋಂದಾಯಿತರಾದವರು) ಎಂದು ಗುರುತಿಸಲಾಗಿದೆ. ಈ ಪಟ್ಟಿಯ ವಿವರಗಳನ್ನು ರಾಜಕೀಯ ಪಕ್ಷಗಳಿಗೆ ಹಸ್ತಾಂತರಿಸಲಾಗಿದ್ದು, ಪರಿಶೀಲನೆಗಾಗಿ ಮತಗಟ್ಟೆ ಮಟ್ಟದ ಅಧಿಕಾರಿಗಳ (BLO) ಬಳಿಯೂ ಲಭ್ಯವಿರಲಿದೆ.
ASDDO ವರ್ಗೀಕರಣದ ವಿವರ ಹೀಗಿದೆ:
ಶಾಶ್ವತವಾಗಿ ವಲಸೆ ಹೋದವರು: 65,45,721 (ಶೇ. 11.81)
ಮರಣ ಹೊಂದಿದ ಮತದಾರರು: 16,39,871 (ಶೇ. 2.96)
ಪತ್ತೆಯಾಗದ / ಗೈರುಹಾಜರಾದವರು: 15,17,056 (ಶೇ. 2.74)
ಈಗಾಗಲೇ ನೋಂದಾಯಿತರಾದವರು: 7,09,875 (ಶೇ. 1.28)
ಇತರರು: 3,83,892 (ಶೇ. 0.69)
ಲಕ್ಷಾಂತರ ಹೊಸ ಅರ್ಜಿಗಳ ಮಹಾಪೂರ:
ಜೂನ್ 16 ರಿಂದ ಆಗಸ್ಟ್ 17, 2026ರ ಅವಧಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ವರ್ಗಾವಣೆಗಾಗಿ ಆಯೋಗಕ್ಕೆ ಒಟ್ಟು 13,42,250 ಅರ್ಜಿಗಳು ಸಲ್ಲಿಕೆಯಾಗಿವೆ.
ಫಾರ್ಮ್ 6 (ಹೊಸ ನೋಂದಣಿ): 4,34,235
ಫಾರ್ಮ್ 6A (ಅನಿವಾಸಿ ಭಾರತೀಯರು): 3,739
ಫಾರ್ಮ್ 7 (ಹೆಸರು ಕೈಬಿಡುವುದು): 31,603
ಫಾರ್ಮ್ 8 (ತಿದ್ದುಪಡಿ/ವರ್ಗಾವಣೆ): 8,72,673
ಹೊಸ ಮತದಾರರಿಗೆ ಆಯೋಗದ ಕರೆ:
ಅಕ್ಟೋಬರ್ 1, 2026 ಕ್ಕೆ 18 ವರ್ಷ ತುಂಬುವ ಅಥವಾ ಪೂರ್ಣಗೊಳಿಸುವ ಎಲ್ಲಾ ಅರ್ಹ ಯುವಕ-ಯುವತಿಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆಯೋಗ ಉತ್ತೇಜಿಸಿದೆ. ಅರ್ಹರು ಬಿಎಲ್‌ಒಗಳ ಮೂಲಕ ಅಥವಾ ಇಸಿನೆಟ್ (ECINET) ಮೊಬೈಲ್ ಆ್ಯಪ್ ಹಾಗೂ voters.eci.gov.in ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಫಾರ್ಮ್-6 ಮತ್ತು ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಇದಲ್ಲದೆ, ಬಿಬಿಎಂಪಿ ಮತ್ತು ಜಿಬಿಎ (GBA) ವ್ಯಾಪ್ತಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ 10 ಲಕ್ಷ ಫಾರ್ಮ್-6 ಗಳನ್ನು ಮುದ್ರಿಸಿ ಇಆರ್‌ಒ (ERO) ಗಳಿಗೆ ವಿತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

