ಬೆಂಗಳೂರು: ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಆಗಸ್ಟ್ 2ರಂದು ನಡೆಯಲಿರುವ ಲಿಖಿತ ಪರೀಕ್ಷೆಯ ಮಧ್ಯಾಹ್ನದ ಅವಧಿಯ ಸಮಯವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬದಲಾವಣೆ ಮಾಡಿದೆ. ಈ ಹಿಂದೆ ನಿಗದಿಪಡಿಸಿದ್ದ ಮಧ್ಯಾಹ್ನ 2.30ರ ಬದಲಿಗೆ ಪರೀಕ್ಷೆಯು ಸಂಜೆ 4 ಗಂಟೆಗೆ ಆರಂಭವಾಗಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ.
ಬೆಳಗಿನ ಅವಧಿಯ ಪರೀಕ್ಷಾ ಕೇಂದ್ರದಿಂದ ಮಧ್ಯಾಹ್ನದ ಪರೀಕ್ಷಾ ಕೇಂದ್ರಗಳು ಸಾಕಷ್ಟು ದೂರವಿದ್ದು, ಅಲ್ಲಿಗೆ ತಲುಪಲು ತೊಂದರೆಯಾಗುತ್ತದೆ ಎಂದು ಕೆಲವು ಅಭ್ಯರ್ಥಿಗಳು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ಸಮಯವನ್ನು ಪರಿಷ್ಕರಿಸಲಾಗಿದ್ದು, ಪರಿಷ್ಕೃತ ವೇಳಾಪಟ್ಟಿಯಂತೆ ಸಂಜೆ 4 ರಿಂದ 5.30ರವರೆಗೆ ಪರೀಕ್ಷೆ ನಡೆಯಲಿದೆ. ಉಳಿದಂತೆ ಬೆಳಗಿನ ಅವಧಿಯ ಪರೀಕ್ಷೆಗಳು ಯಾವುದೇ ಬದಲಾವಣೆಯಿಲ್ಲದೆ ನಿಗದಿತ ಸಮಯಕ್ಕೇ ನಡೆಯಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಬರೆಯಲಿರುವ ಎಲ್ಲಾ ಅಭ್ಯರ್ಥಿಗಳಿಗೆ ಪ್ರಾಧಿಕಾರವು ಪ್ರಮುಖ ಸೂಚನೆಯೊಂದನ್ನು ನೀಡಿದೆ. ಈ ಎರಡು ಜಿಲ್ಲೆಗಳ ಅಭ್ಯರ್ಥಿಗಳು ತಮ್ಮ ಹೊಸ ಪ್ರವೇಶ ಪತ್ರವನ್ನು (Hall Ticket) ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನಿಂದ ಮತ್ತೊಮ್ಮೆ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಈಗಾಗಲೇ ಪ್ರವೇಶ ಪತ್ರ ಪಡೆದುಕೊಂಡಿರುವ ಅಭ್ಯರ್ಥಿಗಳು ಕೂಡ ಕಡ್ಡಾಯವಾಗಿ ಹೊಸ ಪ್ರವೇಶ ಪತ್ರವನ್ನೇ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕು ಎಂದು ಎಚ್. ಪ್ರಸನ್ನ ಅವರು ಸಲಹೆ ನೀಡಿದ್ದಾರೆ.

