Fri. Jul 24th, 2026

ಶಿವಾಜಿನಗರದಲ್ಲಿ ಹಲ್ಲೆಗೊಳಗಾದರೂ ಧೃತಿಗೆಡದ ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸನ್ಮಾನ: ಬೆನ್ನೆಲುಬಾಗಿ ನಿಲ್ಲುವ ಭರವಸೆ!

Share this with Friends

ಬೆಂಗಳೂರು:ನಗರದ ಶಿವಾಜಿನಗರದಲ್ಲಿ ಇತ್ತೀಚೆಗೆ ನಡೆದ ಪಾದಾಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಕಿಡಿಗೇಡಿಗಳಿಂದ ದೈಹಿಕ ಹಲ್ಲೆ ಮತ್ತು ಬೆದರಿಕೆಗೆ ಒಳಗಾಗಿದ್ದರೂ ಧೃತಿಗೆಡದೆ ಕರ್ತವ್ಯ ನಿರ್ವಹಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP/GBA) ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ವೈಯಕ್ತಿಕವಾಗಿ ಆಹ್ವಾನಿಸಿ ವಿಕಾಸಸೌಧದ ಕಚೇರಿಯಲ್ಲಿ ಗೌರವಿಸಿದರು.

ಕರ್ತವ್ಯನಿಷ್ಠೆಗೆ ಸಚಿವರ ಶ್ಲಾಘನೆ:

ಸನ್ಮಾನದ ಬಳಿಕ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಸಾರ್ವಜನಿಕ ಆಸ್ತಿ ಮತ್ತು ಪಾದಾಚಾರಿ ಮಾರ್ಗಗಳ ಸಂರಕ್ಷಣೆಗಾಗಿ ಅಧಿಕಾರಿಗಳು ತೋರಿದ ಧೈರ್ಯ ಹಾಗೂ ದಕ್ಷತೆ ನಿಜಕ್ಕೂ ಅಭಿನಂದನೀಯ. ಕರ್ತವ್ಯದ ಅವಧಿಯಲ್ಲಿ ಇಂತಹ ಕಠಿಣ ಸವಾಲುಗಳು ಮತ್ತು ವಿರೋಧಗಳು ಎದುರಾದರೂ ಅಧಿಕಾರಿಗಳು ಹೆದರಬಾರದು. ಪ್ರಾಮಾಣಿಕವಾಗಿ ಕೆಲಸ ಮಾಡುವ ಪ್ರತಿಯೊಬ್ಬ ಅಧಿಕಾರಿಯ ಹಿಂದೆ ನಮ್ಮ ಸರ್ಕಾರವು ಸದಾ ಬೆನ್ನೆಲುಬಾಗಿ ನಿಲ್ಲಲಿದೆ” ಎಂದು ಭರವಸೆ ನೀಡಿ ಧೈರ್ಯ ತುಂಬಿದರು.

ಕಾನೂನು ಕೈಗೆತ್ತಿಕೊಂಡರೆ ಜೈಲು ಗ್ಯಾರಂಟಿ:

ಕರ್ತವ್ಯನಿರತ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಕಾನೂನು ಕೈಗೆತ್ತಿಕೊಂಡಿರುವ ಕಿಡಿಗೇಡಿಗಳ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲು ಪೋಲೀಸ್ ಇಲಾಖೆಗೆ ಮುಕ್ತ ಅವಕಾಶ ನೀಡಲಾಗಿದೆ. ತಪ್ಪು ಮಾಡಿದವರು ಯಾರೇ ಆಗಿದ್ದರೂ ಶಿಕ್ಷೆ ಗ್ಯಾರಂಟಿ. ಬೆಂಗಳೂರಿನ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸುಗಮ ಸಂಚಾರಕ್ಕೆ ಮುಕ್ತವಾಗಿರಬೇಕು. ಸುಪ್ರೀಂ ಕೋರ್ಟ್‌ನ ಆದೇಶದ ಅನ್ವಯವೇ ಈ ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ನಗರದ ಎಲ್ಲಾ ವಲಯಗಳಲ್ಲೂ ರಾಜಿಯಾಗದೆ ಒತ್ತುವರಿ ತೆರವು ಮುಂದುವರಿಯಲಿದೆ‌ ಎಂದರು.

ಮರಳಿ ಒತ್ತುವರಿಗೆ ಅವಕಾಶವಿಲ್ಲ: ಒಮ್ಮೆ ತೆರವುಗೊಳಿಸಿದ ಜಾಗವನ್ನು ಮತ್ತೆ ಅಕ್ರಮವಾಗಿ ಆಕ್ರಮಿಸಿಕೊಳ್ಳಲು ಯಾರಿಗೂ ಬಿಡುವುದಿಲ್ಲ. ಅಂತಹ ಜಾಗಗಳ ಮೇಲೆ ನಿರಂತರ ನಿಗಾ ಇಡಲು ಸ್ಥಳೀಯ ಪಾಲಿಕೆ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸರ ಜಂಟಿ ಕಾವಲು ಪಡೆಯನ್ನು ನಿಯೋಜಿಸಲಾಗುವುದು. ಬೀದಿಬದಿ ವ್ಯಾಪಾರಿಗಳು ಮುಖ್ಯ ರಸ್ತೆಗಳ ಫುಟ್‌ಪಾತ್ ಆಕ್ರಮಿಸುವುದನ್ನು ತಡೆದು, ಅವರಿಗೆ ವ್ಯಾಪಾರ ಮಾಡಲು ನಿಗದಿಪಡಿಸಲಾದ ಪರ್ಯಾಯ ಒಳರಸ್ತೆ ಅಥವಾ ವಲಯಗಳನ್ನು ಬಳಸಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಸನ್ಮಾನಕ್ಕೊಳಗಾದ ಅಧಿಕಾರಿಗಳ ವಿವರ:

ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸನ್ಮಾನಿಸಲ್ಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ:

ಆತಿಫ್ – ಕಾರ್ಯಪಾಲಕ ಅಭಿಯಂತರರು

ಮಾಧವರಾವ್ – ಸಹಾಯಕ ಕಾರ್ಯಪಾಲಕ ಅಭಿಯಂತರರು

ಸಾವಿತ್ರಿ – ಸಹಾಯಕ ಕಾರ್ಯಪಾಲಕ ಅಭಿಯಂತರರು

ರುಚಿತಾ – ಸಹಾಯಕ ಅಭಿಯಂತರರು

ಗೌತಮ್ – ಇಂಜಿನಿಯರ್

ಜೆಸಿಬಿ ಚಾಲಕನ ಪ್ರತಿನಿಧಿ

ಈ ಸಂದರ್ಭದಲ್ಲಿ ಬಿಬಿಎಂಪಿ ಆಡಳಿತದ ಪ್ರಮುಖರಾದ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಹಾಗೂ ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎ. ಅಮೃತ್ ರಾಜ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಅಧಿಕಾರಿಗಳ ಕಾರ್ಯ ವೈಖರಿಯನ್ನು ಗೌರವಿಸಿದರು.

 

 


Share this with Friends

Related Post