ಬೆಂಗಳೂರು: ಕೇಂದ್ರ ಸರ್ಕಾರದಿಂದ ಅಂತಿಮ ತಾಂತ್ರಿಕ ಅನುಮತಿ ಸಿಗುತ್ತಿದ್ದಂತೆಯೇ ನೆರೆಯ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೇಕೆದಾಟು ಅಣೆಕಟ್ಟು ನಿರ್ಮಾಣ ಕಾರ್ಯ ಆರಂಭಿಸಲು ರಾಜ್ಯ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ದೃಢ ಸಂಕಲ್ಪದೊಂದಿಗೆ ಸರ್ಕಾರ ಹೆಜ್ಜೆ ಇಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ತಮಿಳುನಾಡು ಸೇರಿದಂತೆ ಯಾವುದೇ ನೆರೆ ರಾಜ್ಯಗಳ ಪೂರ್ವ ಸಮ್ಮತಿ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸಂಸತ್ತಿನಲ್ಲಿ ನೀಡಿರುವ ಲಿಖಿತ ಉತ್ತರದ ಬೆನ್ನಲ್ಲೇ ಡಿಸಿಎಂ ಅವರ ಈ ಹೇಳಿಕೆ ಹೊರಬಿದ್ದಿದೆ. ಕೇಂದ್ರದ ಈ ನಿಲುವಿನಿಂದಾಗಿ ಕನ್ನಡಿಗರ ದಶಕಗಳ ಹೋರಾಟಕ್ಕೆ ಬಿಗ್ ಬೂಸ್ಟ್ ಸಿಕ್ಕಂತಾಗಿದೆ.
ಪರಿಷ್ಕೃತ ವರದಿ ಸಲ್ಲಿಕೆ; ಕನಸು ನನಸಾಗುವ ವಿಶ್ವಾಸ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಮೇಕೆದಾಟು ಯೋಜನೆಯ ಪರಿಷ್ಕೃತ ಯೋಜನಾ ವರದಿಯನ್ನು (DPR) ಸಿದ್ಧಪಡಿಸಿ ಕೇಂದ್ರ ಜಲ ಆಯೋಗಕ್ಕೆ (CWA) ಸಲ್ಲಿಸಲಾಗಿತ್ತು. ಕೇಂದ್ರದ ತಾಂತ್ರಿಕ ಒಪ್ಪಿಗೆಗಾಗಿ ಕಾಯುತ್ತಿದ್ದ ನಮಗೆ, ಸಂಸತ್ ಕಲಾಪದಲ್ಲಿ ಜಲಶಕ್ತಿ ಸಚಿವರು ನೀಡಿರುವ ಉತ್ತರವು ಅತ್ಯಂತ ಸಂತಸ ತಂದಿದೆ. ನಮ್ಮ ಸರ್ಕಾರದ ಬಹುದಿನಗಳ ಕನಸು ಶೀಘ್ರದಲ್ಲೇ ಸಾಕಾರಗೊಳ್ಳಲಿದೆ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೆರೆ ರಾಜ್ಯಗಳಿಗೂ ವರದಾನವಾಗಲಿರುವ ಯೋಜನೆ
ಈ ಜಲಾಶಯವು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಸಂಕಷ್ಟದ ಸಮಯದಲ್ಲಿ ನೆರೆಯ ತಮಿಳುನಾಡು ಸೇರಿದಂತೆ ಇತರ ರಾಜ್ಯಗಳ ಜನಜೀವನಕ್ಕೂ ಇದು ಸಹಕಾರಿಯಾಗಲಿದೆ. ನೀರು ಹಂಚಿಕೆ ಮತ್ತು ನಿರ್ವಹಣೆಗೆ ಈ ಯೋಜನೆ ಪೂರಕವಾಗಿ ಕೆಲಸ ಮಾಡಲಿದ್ದು, ತಾಂತ್ರಿಕ ಅನುಮತಿ ಸಿಕ್ಕ ತಕ್ಷಣವೇ ಮುಂದಿನ ಪ್ರಕ್ರಿಯೆಗಳನ್ನು ಚುರುಕುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

