Fri. Jul 24th, 2026

ಪಡಿತರದಾರರಿಗೆ ಸಚಿವ ಮುನಿಯಪ್ಪ ತ್ರಿಪಲ್ ಧಮಾಕಾ: ‘ಇಂದಿರಾ ಕಿಟ್’ ಉಡುಗೊರೆ, ಬಿಪಿಎಲ್ ಕಾರ್ಡ್ ರದ್ದತಿ ಇಲ್ಲ, ಎಪಿಎಲ್‌ಗೂ ಅಕ್ಕಿ ಸಿಗುವ ಭರವಸೆ!

Share this with Friends

ಬೆಂಗಳೂರು:ರಾಜ್ಯದ ಪಡಿತರ ಚೀಟಿದಾರರಲ್ಲಿ ಮೂಡಿದ್ದ ಗೊಂದಲ ಮತ್ತು ಆತಂಕಗಳಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅವರು ತೆರೆ ಎಳೆದಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು ಮೂರು ಅತ್ಯಂತ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು, ಬಿಪಿಎಲ್ ಕಾರ್ಡ್ ಪರಿಷ್ಕರಣೆ ಪ್ರಕ್ರಿಯೆಯ ಸತ್ಯಾಸತ್ಯತೆ, ಹೊಸ ದಿನಸಿ ಕಿಟ್ ಯೋಜನೆ ಹಾಗೂ ಎಪಿಎಲ್ ಕಾರ್ಡುದಾರರಿಗೂ ಅಕ್ಕಿ ನೀಡುವ ಕುರಿತು ಬಿಗ್ ಅಪ್‌ಡೇಟ್‌ಗಳನ್ನು ಹಂಚಿಕೊಂಡಿದ್ದಾರೆ. ಸರ್ಕಾರದ ಈ ನಿರ್ಧಾರಗಳು ರಾಜ್ಯದ ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ರಿಲೀಫ್ ನೀಡಿದೆ.

ಅತ್ಯಗತ್ಯ ದಿನಸಿ ಒಳಗೊಂಡ ‘ಇಂದಿರಾ ಆಹಾರ ಕಿಟ್’ ವಿತರಣೆ:

ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಹೆಚ್ಚುವರಿ ಅಕ್ಕಿಯ ಬದಲಾಗಿ ಇನ್ಮುಂದೆ ಅಗತ್ಯ ಸಾಮಗ್ರಿಗಳನ್ನು ಒಳಗೊಂಡ ‘ಇಂದಿರಾ ಆಹಾರ ಕಿಟ್’ ಅನ್ನು ವಿತರಿಸಲಾಗುವುದು ಎಂದು ಸಚಿವರು ಅಧಿಕೃತವಾಗಿ ತಿಳಿಸಿದ್ದಾರೆ. ಪಡಿತರ ವ್ಯವಸ್ಥೆಯಲ್ಲಿ ಕೇವಲ ಕಾರ್ಬೋಹೈಡ್ರೇಟ್ ಮಾತ್ರವಲ್ಲದೆ ಪೌಷ್ಟಿಕಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಿಟ್ ವಿನ್ಯಾಸಗೊಳಿಸಲಾಗಿದೆ. ಈ ವಿಶೇಷ ಕಿಟ್‌ನಲ್ಲಿ ಅಡುಗೆ ಎಣ್ಣೆ, ತೊಗರಿ ಬೇಳೆ, ಹೆಸರು ಬೇಳೆ, ಸಕ್ಕರೆ ಹಾಗೂ ಅಯೋಡೀಕರಿಸಿದ ಉಪ್ಪು ಇರಲಿವೆ. ರಾಜ್ಯದಾದ್ಯಂತ ಇರುವ ಸುಮಾರು 1.26 ಕೋಟಿ ಬಿಪಿಎಲ್ ಕುಟುಂಬಗಳಿಗೆ ಅವರ ಸದಸ್ಯರ ಸಂಖ್ಯೆಗೆ ಅನುಗುಣವಾಗಿ (ಅರ್ಧ ಕೆಜಿಯಿಂದ 1.5 ಕೆಜಿವರೆಗೆ) ಈ ಕಿಟ್‌ಗಳು ಸಿಗಲಿವೆ. ಇದರೊಂದಿಗೆ ಪಡಿತರ ಕೇಂದ್ರಗಳ ಸಮಯದಲ್ಲೂ ಬದಲಾವಣೆ ತರಲಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಇನ್ಮುಂದೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪಡಿತರ ಕೇಂದ್ರಗಳು ತೆರೆದಿರಲಿವೆ ಎಂದರು.

ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಲ್ಲ, ಅಪಾತ್ರರ ಚೀಟಿ ಎಪಿಎಲ್‌ಗೆ ಶಿಫ್ಟ್:

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳು ಸಾರಾಸಗಟಾಗಿ ರದ್ದಾಗುತ್ತಿವೆ ಎಂಬ ಸಾರ್ವಜನಿಕರ ವದಂತಿ ಹಾಗೂ ಆತಂಕಕ್ಕೆ ಸಚಿವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಮ್ಯಾಪಿಂಗ್ ಮೂಲಕ ಪತ್ತೆಹಚ್ಚಿರುವ 7.76 ಲಕ್ಷ ಅಕ್ರಮ ಪಡಿತರ ಚೀಟಿಗಳ ಪೈಕಿ, ನಿಯಮಾವಳಿಗಳಿಗೆ ಒಳಪಡದ 4,32,295 ಅಪಾತ್ರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲಾಗಿದೆಯೇ ಹೊರತು ರದ್ದುಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರನ್ನು ಹೊರತುಪಡಿಸಿ ಇನ್ನುಳಿದ ಸಾಮಾನ್ಯ ವರ್ಗದ ಬಡ ಕುಟುಂಬಗಳ ಕಾರ್ಡ್‌ಗಳ ರದ್ದತಿಯನ್ನು ತಡೆಯಲಾಗಿದೆ. ಒಂದು ವೇಳೆ ಅರ್ಹ ಬಡ ಕುಟುಂಬಗಳ ಕಾರ್ಡ್‌ಗಳು ತಾಂತ್ರಿಕ ದೋಷದಿಂದ ತಪ್ಪಾಗಿ ಎಪಿಎಲ್‌ಗೆ ಸೇರಿದ್ದರೆ, ಅವರು ಸ್ಥಳೀಯ ಆಹಾರ ಇಲಾಖೆಗೆ ಆಕ್ಷೇಪಣೆ ಸಲ್ಲಿಸಿದ 24 ಗಂಟೆಯೊಳಗೆ ಮರುಪರಿಶೀಲಿಸಿ ಮೊದಲಿನಂತೆ ಬಿಪಿಎಲ್ ಸೌಲಭ್ಯ ನೀಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಸಾರ್ವಜನಿಕರ ಬೇಡಿಕೆ ಆಧಾರದ ಮೇಲೆ ಎಪಿಎಲ್ ಕಾರ್ಡುದಾರರಿಗೂ ಅಕ್ಕಿ:

ಹಿಂದೆ ಎಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು 15 ಕೆಜಿ ಅಕ್ಕಿ ನೀಡುವ ವ್ಯವಸ್ಥೆ ಜಾರಿಯಲ್ಲಿತ್ತು. ಆದರೆ ಬಹುತೇಕ ಮಧ್ಯಮ ಮತ್ತು ಮೇಲ್ವರ್ಗದ ಕುಟುಂಬಗಳು ಪಡಿತರ ಕೇಂದ್ರಗಳಿಗೆ ಬಂದು ಅಕ್ಕಿ ಪಡೆದುಕೊಳ್ಳದ ಕಾರಣ ಹಾಗೂ ಪಡಿತರ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಯೋಜನೆ ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆಯಾಗಿರುವ ಕುಟುಂಬಗಳು ಸೇರಿದಂತೆ ಸಾಮಾನ್ಯ ಎಪಿಎಲ್ ಕಾರ್ಡುದಾರರಿಂದಲೂ ಅಕ್ಕಿಗಾಗಿ ಇಲಾಖೆಗೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಬೇಡಿಕೆ ಮತ್ತು ಮನವಿಗಳು ಬಂದರೆ, ಎಪಿಎಲ್ ಕಾರ್ಡುದಾರರಿಗೂ ಮರಳಿ ಅಕ್ಕಿ ವಿತರಿಸುವ ಕುರಿತು ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಜನರಿಂದ ಬರುವ ಅಧಿಕೃತ ಬೇಡಿಕೆಯನ್ನು ಆಧರಿಸಿ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸಕಾರಾತ್ಮಕ ತೀರ್ಮಾನ ಪ್ರಕಟಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

 

 


Share this with Friends

Related Post