ಬೆಂಗಳೂರು: ಎಸ್‌ಎಸ್‌ಎಲ್‌ಸಿ ಹಿಂದಿ ಭಾಷಾ ಪರೀಕ್ಷೆಯ ದಿನದಂದು ಪ್ರತಿಭಟನೆ ಮತ್ತು ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವ ಕುರಿತ ವಿವಿಧ ಸಂಘಟನೆಗಳ ಎಚ್ಚರಿಕೆಯ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಬಿಗಿ ಪೊಲೀಸ್ ಭದ್ರತೆ ಪಡೆದುಕೊಳ್ಳುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಪರೀಕ್ಷೆಯು ಸುಸೂತ್ರವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮಂಡಲಿಯು ನಿರ್ದೇಶಿಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯದ ಪರೀಕ್ಷೆ ವಿರೋಧಿಸಿ ವಿವಿಧ ಕನ್ನಡಪರ, ದಲಿತ, ರೈತ ಹಾಗೂ ಜನಪರ ಸಂಘಟನೆಗಳು ಕಳೆದ ಮಾರ್ಚ್ 11ರಂದು ಮಂಡಲಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದ್ದವು. ಹಿಂದಿ ಪರೀಕ್ಷೆ ನಡೆಯುವ ಮಾರ್ಚ್ 30ರಂದು ರಾಜ್ಯಾದ್ಯಂತ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವುದಾಗಿ ಈ ಸಂಘಟನೆಗಳು ಎಚ್ಚರಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಮಂಡಳಿ ಮುಂದಾಗಿದೆ.
ಮಂಡಲಿಯ ಸೂಚನೆಗಳು:
ಪರೀಕ್ಷಾ ಕೇಂದ್ರಗಳ ಬಳಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳುವುದು ಮಂಡಲಿಯ ಮೊದಲ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿಪ್ರತಿ ಪರೀಕ್ಷಾ ಕೇಂದ್ರಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು.ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿಭಟನೆ ಅಥವಾ ಗುಂಪು ಸೇರುವುದನ್ನು ತಡೆಯಲು ನಿಷೇಧಾಜ್ಞೆ ಜಾರಿಗೊಳಿಸುವ ಕುರಿತು ಕ್ರಮ ವಹಿಸಬೇಕು.ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಲು ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದು ಮಂಡಲಿಯು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದೆ.
ಸುಸೂತ್ರ ಪರೀಕ್ಷೆಗೆ ತಯಾರಿ:
ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಕುರಿತು ಅಧಿಕೃತ ಮನವಿ ಸಲ್ಲಿಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಭದ್ರತೆಯನ್ನು ಹೆಚ್ಚಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಮತ್ತು ಸಂಘಟನೆಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಹಕರಿಸಬೇಕೆಂದು ಮಂಡಲಿಯು ಆಶಿಸಿದೆ.

