Sat. Jun 6th, 2026

ಆರ್‌ಸಿಬಿ ಅಂದು ‘ಹುಚ್ಚಾಟ’, ಇಂದು 16,500 ಕೋಟಿ ರೂಪಾಯಿ ಬೆಲೆಯ ಆಸ್ತಿ: ಹಳೆಯ ನೆನಪು ಹಂಚಿಕೊಂಡ ವಿಜಯ್ ಮಲ್ಯ!

Share this with Friends

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕುರಿತು ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಆಸಕ್ತಿದಾಯಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಂಡದ ಮೌಲ್ಯವು ಅಂದು ಹಾಕಿದ ಬಂಡವಾಳಕ್ಕಿಂತ ಇಂದು ಹಲವು ಪಟ್ಟು ಹೆಚ್ಚಾಗಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಮರ್ಶಕರಿಗೆ ತಿರುಗೇಟು:

“2008ರಲ್ಲಿ ನಾನು ಆರ್‌ಸಿಬಿ ತಂಡವನ್ನು 450 ಕೋಟಿ ರೂಪಾಯಿಗೆ ಖರೀದಿಸಿದಾಗ, ಅನೇಕರು ನನ್ನ ನಿರ್ಧಾರವನ್ನು ನೋಡಿ ನಕ್ಕಿದ್ದರು. ಅದೊಂದು ವ್ಯರ್ಥ ಹೂಡಿಕೆ ಅಥವಾ ಕೇವಲ ಪ್ರಚಾರಕ್ಕಾಗಿ ಮಾಡಿದ ‘ಹುಚ್ಚಾಟ’ ಎಂದು ಟೀಕಿಸಿದ್ದರು. ಆದರೆ, ನನ್ನ ಆ ಹೂಡಿಕೆಯ ಹಿಂದೆ ‘ರಾಯಲ್ ಚಾಲೆಂಜ್’ ಬ್ರ್ಯಾಂಡ್ ಅನ್ನು ಕಟ್ಟುವ ದೊಡ್ಡ ಗುರಿಯಿತ್ತು. ಅದಕ್ಕಾಗಿಯೇ ತಂಡಕ್ಕೆ ಆರ್‌ಸಿಬಿ ಎಂದು ಹೆಸರಿಟ್ಟಿದ್ದೆ,” ಎಂದು ಮಲ್ಯ ನೆನಪಿಸಿಕೊಂಡಿದ್ದಾರೆ.

16,500 ಕೋಟಿಗೆ ಏರಿದ ಮೌಲ್ಯ:

ತಮ್ಮ ಹೂಡಿಕೆಯು ಇಂದು ಗಗನಕ್ಕೇರಿರುವುದನ್ನು ಉಲ್ಲೇಖಿಸಿದ ಅವರು, “ಅಂದು 450 ಕೋಟಿ ರೂಪಾಯಿಗೆ ಆರಂಭವಾದ ಈ ಪಯಣ, ಇಂದು 16,500 ಕೋಟಿ ರೂಪಾಯಿ ಮೌಲ್ಯದ ಫ್ರಾಂಚೈಸಿಯಾಗಿ ಬೆಳೆದು ನಿಂತಿರುವುದು ಹೆಮ್ಮೆಯ ವಿಚಾರ,” ಎಂದಿದ್ದಾರೆ. ಅಲ್ಲದೆ, ತಂಡದ ನೂತನ ಮಾಲೀಕರಿಗೆ ಅವರು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ವಿರಾಟ್ ಕೊಹ್ಲಿ ಎಂಬ ಆಣಿಮುತ್ತು:

ತಮ್ಮ ಅವಧಿಯಲ್ಲಿ ತಂಡಕ್ಕೆ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿದ್ದನ್ನು ಮಲ್ಯ ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. “ಯುವ ಆಟಗಾರನಾಗಿದ್ದ ವಿರಾಟ್ ಕೊಹ್ಲಿಯನ್ನು ಅಂದು ತಂಡಕ್ಕೆ ಆಯ್ಕೆ ಮಾಡಿದ್ದು ಮರೆಯಲಾಗದ ನೆನಪು. ಇಂದು ಅವರು ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿ ಬೆಳೆದಿರುವುದು ವೈಯಕ್ತಿಕವಾಗಿ ನನಗೆ ತೃಪ್ತಿ ತಂದಿದೆ,” ಎಂದು ಹೇಳಿದ್ದಾರೆ.

ಅಭಿಮಾನಿಗಳಿಗೆ ಧನ್ಯವಾದ:

ಬೆಂಗಳೂರಿನ ಅಭಿಮಾನಿಗಳನ್ನು ‘ಬೆಂಗಳೂರಿನ ಸಿಂಹಗಳು’ ಎಂದು ಬಣ್ಣಿಸಿರುವ ಮಲ್ಯ, “ಆರ್‌ಸಿಬಿ ಯಾವಾಗಲೂ ನನ್ನ ಡಿಎನ್‌ಎಯ ಭಾಗವಾಗಿರುತ್ತದೆ. ತಂಡಕ್ಕೆ ಮೊದಲಿನಿಂದಲೂ ಬೆಂಬಲ ನೀಡುತ್ತಿರುವ ಅಭಿಮಾನಿಗಳಿಗೆ ನನ್ನ ಕೃತಜ್ಞತೆಗಳು. ಮುಂದೆಯೂ ತಂಡಕ್ಕೆ ಇದೇ ರೀತಿ ಬೆಂಬಲ ನೀಡಿ,” ಎಂದು ಮನವಿ ಮಾಡಿದ್ದಾರೆ.

 


Share this with Friends

Related Post