Thu. Aug 6th, 2026

ಪ್ರಧಾನಿ ಮೋದಿಗೆ ಇಸ್ರೇಲ್ ಪಿಎಂ ನೆತನ್ಯಾಹು ಕರೆ: ದ್ವಿಪಕ್ಷೀಯ ಬಾಂಧವ್ಯ ಹಾಗೂ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ಮಹತ್ವದ ಚರ್ಚೆ

Share this with Friends

ನವದೆಹಲಿ: ಜಾಗತಿಕ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹಾಗೂ ಸದ್ಯ ಪಶ್ಚಿಮ ಏಷ್ಯಾ ವಲಯದಲ್ಲಿ ಸೃಷ್ಟಿಯಾಗಿರುವ ಯುದ್ಧ ಸದೃಶ್ಯ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಸಂಭಾಷಣೆ ಭಾರಿ ಮಹತ್ವ ಪಡೆದುಕೊಂಡಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಂದ ದೂರವಾಣಿ ಕರೆ ಬಂದಿತ್ತು. ನಿರಂತರವಾಗಿ ಅತ್ಯಂತ ಸದೃಢವಾಗಿ ಬೆಳೆಯುತ್ತಿರುವ ಭಾರತ ಮತ್ತು ಇಸ್ರೇಲ್ ನಡುವಿನ ‘ವಿಶೇಷ ಕಾರ್ಯತಂತ್ರದ ಪಾಲುದಾರಿಕೆ’ಯ ವಿವಿಧ ಆಯಾಮಗಳ ಪ್ರಗತಿಯನ್ನು ನಾವು ಪರಾಮರ್ಶಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಇದರೊಂದಿಗೆ, ಪ್ರಸ್ತುತ ಪಶ್ಚಿಮ ಏಷ್ಯಾ (ವೆಸ್ಟ್ ಏಷ್ಯಾ) ಭಾಗದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿ ಹಾಗೂ ಭದ್ರತಾ ಸವಾಲುಗಳ ಕುರಿತೂ ಉಭಯ ನಾಯಕರು ತಮ್ಮ ರಾಜತಾಂತ್ರಿಕ ದೃಷ್ಟಿಕೋನ ಹಾಗೂ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ. ರಕ್ಷಣಾ ಮತ್ತು ತಂತ್ರಜ್ಞಾನ ವಲಯದಲ್ಲಿ ಭಾರತ-ಇಸ್ರೇಲ್ ಸ್ನೇಹ ಮತ್ತಷ್ಟು ಗಟ್ಟಿಯಾಗುತ್ತಿರುವುದನ್ನು ಈ ಸಂಭಾಷಣೆ ಪುಷ್ಟೀಕರಿಸಿದೆ.

 


Share this with Friends

Related Post