ಬೆಂಗಳೂರು: ಕೇಂದ್ರದಲ್ಲಿ NEET ಪರೀಕ್ಷೆಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ಜವಾಬ್ದಾರಿ ವಹಿಸಿಕೊಂಡ ಉದಾಹರಣೆಗಳನ್ನು ಉಲ್ಲೇಖಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಕರ್ನಾಟಕದಲ್ಲಿ ನಡೆದಿರುವ ಸಾಲು ಸಾಲು ಗಂಭೀರ ಘಟನೆಗಳಿಗೆ ನೈತಿಕ ಹೊಣೆ ಹೊರುವವರು ಯಾರು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಉತ್ತರದಾಯಿತ್ವದ ಕೊರತೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
KPSC ನೇಮಕಾತಿ ಅಕ್ರಮದ ಆರೋಪ
ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಅಶೋಕ್ ಆರೋಪಿಸಿದ್ದಾರೆ. ಒಂದು ಹುದ್ದೆಗೆ ಬರೋಬ್ಬರಿ ₹80 ಲಕ್ಷ ಡೀಲ್ ನಡೆದಿರುವ ಕುರಿತ ಆಡಿಯೋ ಬಹಿರಂಗವಾಗಿದೆ ಎಂದಿರುವ ಅವರು, “ಈ ಭ್ರಷ್ಟಾಚಾರದ ಆರೋಪಗಳ ಕುರಿತು ಸಮಗ್ರ, ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ಯಾವಾಗ ನಡೆಯುತ್ತದೆ? ಇದಕ್ಕೆ ಯಾರು ರಾಜೀನಾಮೆ ನೀಡುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
ಐಪಿಎಲ್ ವಿಜಯೋತ್ಸವ ದುರಂತ
ಇತ್ತೀಚೆಗೆ ನಡೆದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತದಲ್ಲಿ 11 ಅಮಾಯಕರು ಜೀವ ಕಳೆದುಕೊಂಡಿರುವುದನ್ನು ನೆನಪಿಸಿರುವ ಅವರು, ಈ ಘಟನೆಯ ಆಡಳಿತಾತ್ಮಕ ವೈಫಲ್ಯಕ್ಕೆ ಯಾರು ಹೊಣೆ? ನೊಂದ ಕುಟುಂಬಗಳಿಗೆ ನ್ಯಾಯ ಸಿಗುವುದು ಯಾವಾಗ ಎಂದು ಕೇಳಿದ್ದಾರೆ. ಅಧಿಕಾರಿಗಳ ಮೇಲೆ ಗೂಬೆ ಕೂರಿಸದೆ ಆಡಳಿತ ಚುಕ್ಕಾಣಿ ಹಿಡಿದವರು ಜವಾಬ್ದಾರಿ ಹೊರಬೇಕು ಎಂದು ಒತ್ತಾಯಿಸಿದ್ದಾರೆ.
ರೈತರ ಆತ್ಮಹತ್ಯೆ ಮತ್ತು ಮೈಕ್ರೋ ಫೈನಾನ್ಸ್ ಹಾವಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಅವಧಿಯಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಶೋಕ್ ಕಳವಳ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಡೆಯಲಾರದೆ ನೂರಾರು ಬಡ ಸಾಲಗಾರರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇವೆಲ್ಲದಕ್ಕೂ ಸರ್ಕಾರದ ನೀತಿಗಳೇ ಕಾರಣ ಎಂದು ಅವರು ದೂರಿದ್ದಾರೆ.
“ಪ್ರಜಾಪ್ರಭುತ್ವದಲ್ಲಿ ಅಧಿಕಾರ ಎಂದರೆ ಕೇವಲ ಹುದ್ದೆಯಲ್ಲ, ಅದೊಂದು ದೊಡ್ಡ ಜವಾಬ್ದಾರಿ. ತಪ್ಪುಗಳು ನಡೆದಾಗ ನಾಮಕಾವಸ್ತೆ ತನಿಖೆ ನಡೆಸಿ ನುಣುಚಿಕೊಳ್ಳಬಾರದು. ಪ್ರತಿಯೊಂದು ಪ್ರಕರಣದಲ್ಲೂ ಸತ್ಯ ಹೊರಬರಬೇಕು ಮತ್ತು ಜನರ ವಿಶ್ವಾಸ ಮರುಸ್ಥಾಪಿಸುವ ಕೆಲಸವಾಗಬೇಕು” ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.

