ಬೆಂಗಳೂರು: ರಾಜ್ಯದ ಅತ್ಯಂತ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಿ, ನೇಕಾರರ ಆರ್ಥಿಕ ಜೀವನೋಪಾಯವನ್ನು ಬಲಪಡಿಸಲು ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯ ಸರ್ಕಾರದ ಮುಂಬರುವ ನೂತನ ‘ಕರ್ನಾಟಕ ಜವಳಿ ಮತ್ತು ಉಡುಪು ನೀತಿ’ಯಲ್ಲಿ ಕೈಮಗ್ಗ ಕ್ಷೇತ್ರದ ಪ್ರಚಾರ ಹಾಗೂ ಅಭಿವೃದ್ಧಿಗಾಗಿಯೇ ಪ್ರತ್ಯೇಕವಾದ ವಿಶೇಷ ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದು ಎಂಎಸ್‌ಎಂಇ, ಗಣಿ ಮತ್ತು ಜವಳಿ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ 12ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ರಾಜ್ಯಮಟ್ಟದ ಸವಲತ್ತು ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಹೊಸ ಗುರುತು:
ರಾಜ್ಯದ ಸಾಂಪ್ರದಾಯಿಕ ಕೈಮಗ್ಗ ಉತ್ಪನ್ನಗಳಿಗೆ ಕೇವಲ ಸ್ಥಳೀಯವಾಗಿ ಮಾತ್ರವಲ್ಲದೆ, ರಾಷ್ಟ್ರೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಹೊಸದೊಂದು ಬ್ರ್ಯಾಂಡ್ ಮತ್ತು ವಿಶಿಷ್ಟ ಗುರುತನ್ನು ಸೃಷ್ಟಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. “ಕೈಮಗ್ಗ ಕ್ಷೇತ್ರವು ನಮ್ಮ ಕೇವಲ ಸಾಂಸ್ಕೃತಿಕ ಪರಂಪರೆಯಷ್ಟೇ ಅಲ್ಲ, ಅದು ಸಾವಿರಾರು ನೇಕಾರ ಕುಟುಂಬಗಳ ಜೀವನಾಧಾರವಾಗಿದೆ. ಈ ಪರಂಪರೆಯನ್ನು ಉಳಿಸಿ, ಆಧುನಿಕ ಮಾರುಕಟ್ಟೆಯ ಇಂದಿನ ಅಗತ್ಯಗಳಿಗೆ ತಕ್ಕಂತೆ ರೂಪಾಂತರಗೊಳಿಸಿ ಹೊಸ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ” ಎಂದು ಅವರು ಪ್ರತಿಪಾದಿಸಿದರು.
ಯಾವೆಲ್ಲಾ ಸುಧಾರಣೆಗೆ ಬಳಕೆ?
ಮೀಸಲಿಡಲಾಗಿರುವ ಈ ವಿಶೇಷ ಅನುದಾನದ ಮೂಲಕ ಕೈಮಗ್ಗ ಕ್ಷೇತ್ರದಲ್ಲಿ ಆಧುನಿಕ ವಿನ್ಯಾಸಗಳ ಅಭಿವೃದ್ಧಿ (Design Development), ಉತ್ಪನ್ನಗಳ ಮೌಲ್ಯವರ್ಧನೆ, ಬ್ರ್ಯಾಂಡಿಂಗ್, ಡಿಜಿಟಲ್ ಮಾರುಕಟ್ಟೆ ಪ್ರಚಾರ, ಇ-ಕಾಮರ್ಸ್ ಕ್ರಾಂತಿ ಹಾಗೂ ಜಾಗತಿಕ ಮಾರುಕಟ್ಟೆ ವಿಸ್ತರಣೆಗೆ ಹೊಸ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು. ಇದು ನೇಕಾರರ ಸ್ಪರ್ಧಾತ್ಮಕ ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಹೆಚ್ಚಿಸಲಿದೆ ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕೈಮಗ್ಗ ಉತ್ಪನ್ನಗಳ ಭವ್ಯ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ರೋಹಿಣಿ ಸಿಂಧೂರಿ ಅವರು ಉದ್ಘಾಟಿಸಿ, ನೇಕಾರರ ಕರಕುಶಲತೆಯನ್ನು ಶ್ಲಾಘಿಸಿದರು.
ಜವಳಿ ಅಭಿವೃದ್ಧಿ ಆಯುಕ್ತರಾದ ಎ.ಬಿ. ಬಸವರಾಜು ಮಾತನಾಡಿ,ಕರ್ನಾಟಕದ ಕೈಮಗ್ಗ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಸ್ಪರ್ಧಾತ್ಮಕವಾಗಿ ಪರಿಚಯಿಸುವ ಗುರಿಯೊಂದಿಗೆ ಹೊಸ ಜವಳಿ ನೀತಿ ರೂಪಿಸಲಾಗುತ್ತಿದೆ ಎಂದರು.
“ಕರ್ನಾಟಕದ ಕೈಮಗ್ಗ ಕ್ಷೇತ್ರವು ನಮ್ಮ ಸಂಸ್ಕೃತಿ ಮತ್ತು ಆರ್ಥಿಕತೆಯ ಅಮೂಲ್ಯ ಆಸ್ತಿ. ಹೊಸ ಜವಳಿ ನೀತಿ ಹಾಗೂ ಸಾಮಾಜಿಕ ಜಾಲತಾಣ ಅಭಿಯಾನದ ಮೂಲಕ ರಾಜ್ಯದ ಕೈಮಗ್ಗ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆಗೆ ಮತ್ತಷ್ಟು ಪರಿಣಾಮಕಾರಿಯಾಗಿ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದೇವೆ,” ಎಂದು ಹೇಳಿದರು.
ಅಲ್ಲದೆ, “ನಮ್ಮ ನೇಕಾರರ ಕೌಶಲ್ಯಕ್ಕೆ ಜಾಗತಿಕ ಮನ್ನಣೆ ದೊರಕುವಂತೆ ವಿನ್ಯಾಸ, ತಂತ್ರಜ್ಞಾನ, ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ಸಂಪರ್ಕಕ್ಕೆ ಇಲಾಖೆ ವಿಶೇಷ ಆದ್ಯತೆ ನೀಡುತ್ತಿದೆ,” ಎಂದು ತಿಳಿಸಿದರು.
ಮಾಜಿ ಸಚಿವೆ ಹಾಗೂ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಮಾತನಾಡಿ, “ಕೈಮಗ್ಗವು ಕೇವಲ ಒಂದು ವೃತ್ತಿಯಲ್ಲ; ಅದು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿದೆ. ನೇಕಾರರ ಕೈಚಳಕವನ್ನು ಗೌರವಿಸುವುದು ನಮ್ಮ ಪರಂಪರೆಯನ್ನು ಉಳಿಸುವುದಕ್ಕೆ ಸಮಾನ,” ಎಂದು ಹೇಳಿದರು.

