Sat. Jun 6th, 2026

ರಾಜ್ಯ ಸರ್ಕಾರದ ಸಾಧನಾ ಸಮಾವೇಶವೋ, ಸಾಲದ ದಾಖಲೆ ಸಮಾವೇಶವೊ: ಬಸವರಾಜ ಬೊಮ್ಮಾಯಿ

Basavaraj Bommai
Share this with Friends

ಬೆಂಗಳೂರು: ರಾಜ್ಯದ ಸಾಲ ಹೆಚ್ಚಳ ಮಾಡಿರುವುದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅತಿ ಹೆಚ್ಚು ಸಾಲ ಮಾಡಿರುವ ದಾಖಲೆ ಬರೆದಿದ್ದು, ಸಾಧನೆಯ ಸಮಾವೇಶದ ಬದಲು ಸಾಲದ ದಾಖಲೆ ಸಮಾವೇಶ ಮಾಡಿದರೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ

ಈ ಕುರಿತು ಎಕ್ಸ್ ಮಾಡಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಯಾವ ಸಾಧನೆ ಮಾಡಿದ್ದಾರೆಂದು ಹೇಳಿಕೊಳ್ಳಲು ಮೂರನೇ ವರ್ಷದ ಸಾಧನಾ ಸಮಾವೇಶ ಮಾಡುತ್ತಿದ್ದಾರೆ.  ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರೆಂಟಿ ಹೆಸರಿನಲ್ಲಿ ಆರಂಭದಿಂದಲೇ ವಿದ್ಯುತ್ ದರ, ಸ್ಟಾಂಪ್ ಡ್ಯೂಟಿ, ಪೆಟ್ರೊಲ್ ಡಿಸೇಲ್ ದರ, ನೀರಿನ ದರ ಹೆಚ್ಚಳ ಮಾಡಿಯೂ ರಾಜ್ಯದ ಸಾಲ ಹೆಚ್ಚಳ ಮಾಡಿರುವುದೇ ಸಾಧನೆಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅತಿ ಹೆಚ್ಚು ಸಾಲ ಮಾಡಿರುವ ದಾಖಲೆ ಬರೆದಿದ್ದು, ಸಾಧನೆಯ ಸಮಾವೇಶದ ಬದಲು ಸಾಲದ ದಾಖಲೆ ಸಮಾವೇಶ ಮಾಡಿದರೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಸರ್ಕಾರ ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಬಡವರಿಗೆ ಒಂದೇ ಒಂದು ಹೊಸ ಮನೆ ನೀಡಿಲ್ಲ, ಹೊಸ ರಸ್ತೆ ನಿರ್ಮಾಣ ಮಾಡಿಲ್ಲ, ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ  ಸಿಗುತ್ತಿಲ್ಲ, ಹೊಸ ಶಾಲಾ ಕಟ್ಟಡ ನಿರ್ಮಾಣ ಮಾಡಿಲ್ಲ, ಶಾಲೆಗಳಲ್ಲಿ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ದೊರೆಯುತ್ತಿಲ್ಲ. ರಾಜ್ಯದ ಖಜಾನೆ ಖಾಲಿ ಮಾಡಿರುವುದೇ ಈ ಸರ್ಕಾರದ ಸಾಧನೆಯಾಗಿದೆ.  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಮಹಿಳೆಯರು, ಶಾಲಾ ವಿದ್ಯಾರ್ಥಿನಿಯರು ಮನೆಯಿಂದ ಹೊರಗೆ ಹೋದರೆ ಸಂಜೆ ಮನೆಗೆ ಬರುತ್ತಾರೊ ಇಲ್ಲವೊ ಎನ್ನುವ ನಂಬಿಕೆ ಇಲ್ಲದಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಒಸಿ, ಮಟಕಾ ಇಸ್ಪೀಟ್ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಪೊಲಿಸ್ ಸ್ಟೇಷನ್ ಗಳು ವಸೂಲಿ ಕೇಂದ್ರಗಳಾಗಿವೆ. ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರದ ಆರಂಭದಿಂದಲೂ ಕುರ್ಚಿ ಉಳಿಸಿಕೊಳ್ಳಲು ಮತ್ತು ಕಸಿದುಕೊಳ್ಳಲು ನಿರಂತರ ಪೈಪೋಟಿ ನಡೆಯುತ್ತಿದ್ದು, ಈ ಸಮಾವೇಶ ಕುರ್ಚಿ ಉಳಿಸಿಕೊಳ್ಳುವ ಶಕ್ತಿ ಪ್ರದರ್ಶನದ ಸಮಾವೇಶವಾ ಎನ್ನುವ ಅನುಮಾನ ರಾಜ್ಯದ ಜನರಲ್ಲಿ ಮೂಡಿದೆ. ರಾಜ್ಯದ ಜನರು ಈ ಸರ್ಕಾರದ ನಾಯಕರ ಕುರ್ಚಿ ಕಚ್ಚಾಟ ಮತ್ತು ಭ್ರಷ್ಟಾಚಾರದಿಂದ ರೋಸಿ ಹೋಗಿದ್ದು ಈ ಕೆಟ್ಟ ಸರ್ಕಾರ ಯಾವಾಗ ತೊಲಗುತ್ತದೆ ಎಂದು ಕಾಯುತ್ತಿದ್ದಾರೆ. ಈ ಸರ್ಕಾರದ ಅಂತ್ಯ ಈ ಸಮಾವೇಶದಿಂದಲೇ ಆರಂಭವಾಗುವ ಸಾಧ್ಯತೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.


Share this with Friends

Related Post