Mon. Aug 3rd, 2026

ಹೊಸ ಸಚಿವರಿಗೆ ಸುರ್ಜೇವಾಲ ನೀಡಿದ ಸೂಚನೆ ಏನು?

Share this with Friends

ಬೆಂಗಳೂರು:ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಘೋಷಿಸಲಾಗಿರುವ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಅತ್ಯಗತ್ಯವಾಗಿದ್ದು ಸರ್ಕಾರದ ಅಭಿವೃದ್ಧಿ ಕಾರ್ಯಸೂಚಿಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಶ್ರಮಿಸಬೇಕು ಎಂದು ನೂತನ ಸಚಿವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೂಚನೆ ನೀಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ಕರ್ನಾಟಕದ ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಎಲ್ಲಾ ಸಚಿವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಕನ್ನಡಿಗರ ಸೇವೆಯಲ್ಲಿ ಅವರ ಅಧಿಕಾರಾವಧಿ ಯಶಸ್ವಿ ಮತ್ತು ಜನಪರವಾಗಿರಲಿ ಎಂದು ಹಾರೈಸುತ್ತೇನೆ ಎಂದು ಅಭಿನಂದನಾ ಸಂದೇಶವನ್ನು ರವಾನಿಸಿದ್ದಾರೆ.

ಸಾಮಾಜಿಕ ನ್ಯಾಯಕ್ಕೆ ಬದ್ಧತೆಯನ್ನು ಪ್ರತಿಬಿಂಬಿಸುವುದರ ಜೊತೆಗೆ, ಯುವಶಕ್ತಿ ಮತ್ತು ಅನುಭವದ ಆದರ್ಶ ಸಮನ್ವಯವನ್ನು ಒಳಗೊಂಡ ಸಚಿವ ಸಂಪುಟವನ್ನು ಕರ್ನಾಟಕ ಕಾಂಗ್ರೆಸ್ ರಚಿಸಿದೆ. ಪ್ರತಿಯೊಬ್ಬ ಸಚಿವರು ಹಾಗೂ ಕಾರ್ಯಕರ್ತರು, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಆರಂಭವಾದ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ಮತ್ತು ಅಭಿವೃದ್ಧಿಯ ಕಾರ್ಯಸೂಚಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಈ ಅಭಿವೃದ್ಧಿಯ ಪಯಣವನ್ನು ಡಿ.ಕೆ. ಶಿವಕುಮಾರ್ ಅವರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದಿದ್ದಾರೆ.

ಪ್ರತಿಯೊಬ್ಬ ಕನ್ನಡಿಗರ ಯಶಸ್ಸಿನಲ್ಲೇ ಕಾಂಗ್ರೆಸ್ ಸರ್ಕಾರದ ಯಶಸ್ಸಿದೆ. ಪ್ರತಿಯೊಬ್ಬ ಕನ್ನಡಿಗರ ಕಲ್ಯಾಣದಲ್ಲೇ ಕಾಂಗ್ರೆಸ್ ಸರ್ಕಾರದ ಧ್ಯೇಯ ಮತ್ತು ಬದ್ಧತೆ ಅಡಗಿದೆ ಎಂದಿದ್ದಾರೆ.


Share this with Friends

Related Post