Mon. Aug 3rd, 2026

ಕಾಂಗ್ರೆಸ್‌ನಿಂದ ಮತ್ತೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ: ಸುರೇಶ್ ಕುಮಾರ್ ಗಂಭೀರ ಆರೋಪ

Share this with Friends

ಬೆಂಗಳೂರು: ವಿಧಾನಮಂಡಲದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷವು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಎಸ್. ಸುರೇಶ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯ ಸ್ಪೀಕರ್, ಡೆಪ್ಯುಟಿ ಸ್ಪೀಕರ್ ಹಾಗೂ ವಿಧಾನ ಪರಿಷತ್ತಿನ ಸಭಾಪತಿ, ಉಪಸಭಾಪತಿ ಹುದ್ದೆಗಳು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಲ್ಲ. ಅವುಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಪಕ್ಷಾತೀತ ಹಾಗೂ ಅತ್ಯುನ್ನತ ಸ್ಥಾನಗಳಾಗಿವೆ ಎಂದು ಅವರು ನೆನಪಿಸಿದ್ದಾರೆ.

ಆದರೆ, ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಲೆಟರ್‌ಹೆಡ್‌ನಲ್ಲಿ ಈ ಸಾಂವಿಧಾನಿಕ ಹುದ್ದೆಗಳ ಹೆಸರನ್ನು ಬಳಸಿರುವುದು ಅತ್ಯಂತ ಖಂಡನೀಯ. ಇಂತಹ ನಡೆ ಈ ಗೌರವಾನ್ವಿತ ಸ್ಥಾನಗಳ ನಿಷ್ಪಕ್ಷಪಾತತೆಗೆ ಧಕ್ಕೆ ತರುವುದಲ್ಲದೆ, ಅವುಗಳ ಘನತೆಯನ್ನೂ ಕುಗ್ಗಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯದ ಈ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಬೇಕಿರುವ ಮುಖಂಡರ ಹೆಸರುಗಳನ್ನು ಆಡಳಿತ ಪಕ್ಷದ ಲೆಟರ್‌ಹೆಡ್ ಬಳಸಿ ದೆಹಲಿ ಹೈಕಮಾಂಡ್‌ನಿಂದಲೇ ಕಳುಹಿಸುತ್ತಿರುವುದು ಇತಿಹಾಸದಲ್ಲೇ ಇದೇ ಮೊದಲು. ಇದು ಕೇವಲ ಸಂಸದೀಯ ಸಂಪ್ರದಾಯದ ಉಲ್ಲಂಘನೆಯಷ್ಟೇ ಅಲ್ಲ, ಸಂವಿಧಾನದ ಮೇಲಿನ ನಿರ್ಲಕ್ಷ್ಯವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಬಾಯಲ್ಲಿ ಸಂವಿಧಾನದ ರಕ್ಷಣೆ ಎಂದು ಜಪಿಸುವ ಕಾಂಗ್ರೆಸ್, ಆಚರಣೆಯಲ್ಲಿ ಮಾತ್ರ ಉನ್ನತ ಸಾಂವಿಧಾನಿಕ ಸಂಸ್ಥೆಗಳನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಈ ಮೂಲಕ ಕಾಂಗ್ರೆಸ್‌ನ ದ್ವಂದ್ವ ನೀತಿ ಮತ್ತೊಮ್ಮೆ ರಾಜ್ಯದ ಜನರ ಮುಂದೆ ಬಯಲಾಗಿದೆ ಎಂದು ಸುರೇಶ್ ಕುಮಾರ್ ಕಿಡಿಕಾರಿದ್ದಾರೆ.

 


Share this with Friends

Related Post