ಉಡುಪಿ:ಕರಾವಳಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆಯು ಜಿಲ್ಲೆಗೆ ‘ಆರೆಂಜ್ ಅಲರ್ಟ್’ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನಾಳೆ ಜುಲೈ 25ರ ಶನಿವಾರ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಯಾವೆಲ್ಲಾ ಸಂಸ್ಥೆಗಳಿಗೆ ರಜೆ ಅನ್ವಯ?
ಜಿಲ್ಲಾಡಳಿತದ ಆದೇಶದ ಅನ್ವಯ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಪದವಿ ಪೂರ್ವ (PUC) ಕಾಲೇಜುಗಳು, ಡಿಪ್ಲೊಮಾ ಹಾಗೂ ಐಟಿಐ (ITI) ಸಂಸ್ಥೆಗಳಿಗೆ ನಾಳೆ ಸಂಪೂರ್ಣ ರಜೆ ಇರಲಿದೆ.
ಈ ರಜೆಯು ಪದವಿ (Degree), ಸ್ನಾತಕೋತ್ತರ ಪದವಿ (PG) ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಮಳೆಯಿಂದಾಗಿ ಉಂಟಾಗುವ ಪಾಠ ಪ್ರವಚನಗಳ ಸಮಯದ ಕೊರತೆಯನ್ನು ಸರಿದೂಗಿಸಲು ಮುಂದಿನ ಶನಿವಾರಗಳ ಮಧ್ಯಾಹ್ನದ ಅವಧಿ ಅಥವಾ ಭಾನುವಾರಗಳಂದು ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳುವಂತೆ ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ.
ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಡಳಿತದ ಕಟ್ಟುನಿಟ್ಟಿನ ಮಾರ್ಗಸೂಚಿಗಳು:
ಹಾಜರಾತಿ ಕಡ್ಡಾಯವಿಲ್ಲ: ಕಾಲೇಜುಗಳಲ್ಲಿ ಪ್ರಸ್ತುತ ಪಾಠ ಪ್ರವಚನಗಳು ನಡೆದರೂ ಸಹ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ.
ಪ್ರಾಂಶುಪಾಲರ ಜವಾಬ್ದಾರಿ: ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ಮತ್ತು ಸುರಕ್ಷಿತವಾಗಿ ಮನೆಗೆ ಮರಳುವ ಬಗ್ಗೆ ಪ್ರಾಂಶುಪಾಲರು ವೈಯಕ್ತಿಕ ನಿಗಾ ವಹಿಸಬೇಕು.
ಶಿಥಿಲ ಕಟ್ಟಡಗಳ ಬಳಕೆ ನಿಷೇಧ: ಯಾವುದೇ ಕಾರಣಕ್ಕೂ ಶಿಥಿಲಾವಸ್ಥೆಯಲ್ಲಿರುವ ಅಥವಾ ದುರ್ಬಳಕೆಯ ಕಟ್ಟಡಗಳನ್ನು ತರಗತಿಗಳಿಗೆ ಬಳಸುವಂತಿಲ್ಲ.
ಜಲಮೂಲಗಳಿಂದ ದೂರವಿರಿ: ಸನಿಹದ ಹಳ್ಳ, ತೋಡುಗಳನ್ನು ದಾಟಬೇಕಾದ ಪರಿಸ್ಥಿತಿ ಇರುವ ವಿದ್ಯಾರ್ಥಿಗಳಿಗೆ ಮನೆಯಲ್ಲೇ ಇರಲು ಸೂಚಿಸಬೇಕು. ವಿದ್ಯಾರ್ಥಿಗಳು ನದಿ, ಕೆರೆ, ಸಮುದ್ರ ತೀರ ಹಾಗೂ ನೀರು ನಿಲ್ಲುವ ಅಪಾಯಕಾರಿ ಜಾಗಗಳಿಗೆ ಹೋಗದಂತೆ ಪೋಷಕರು ಮತ್ತು ಶಿಕ್ಷಕರು ಜಾಗ್ರತೆ ವಹಿಸಬೇಕು.
ಪ್ರಕೃತಿ ವಿಕೋಪ ತುರ್ತು ಸಹಾಯವಾಣಿ ಸಂಖ್ಯೆಗಳು:
ಮಳೆ ಹಾಗೂ ಗಾಳಿಗೆ ಸಂಬಂಧಿಸಿದ ಯಾವುದೇ ಪ್ರಕೃತಿ ವಿಕೋಪದ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ತಕ್ಷಣವೇ ಸಂಪರ್ಕಿಸಲು ಜಿಲ್ಲಾ ನಿಯಂತ್ರಣ ಕೊಠಡಿಯ (Control Room) 24*7 ಸಹಾಯವಾಣಿ ಸಂಖ್ಯೆ 1077 ಅಥವಾ 0820-2574802 ಅನ್ನು ಸಂಪರ್ಕಿಸಬಹುದಾಗಿದೆ. ತಾಲೂಕುವಾರು ಕಂಟ್ರೋಲ್ ರೂಂ ಸಂಖ್ಯೆಗಳು ಈ ಕೆಳಗಿನಂತಿವೆ:
ಉಡುಪಿ ತಾಲೂಕು: 0820-2520417
ಕಾರ್ಕಳ ತಾಲೂಕು: 08258-230201
ಕುಂದಾಪುರ ತಾಲೂಕು: 08254-230357
ಬ್ರಹ್ಮಾವರ ತಾಲೂಕು: 0820-2560494
ಬೈಂದೂರು ತಾಲೂಕು: 08254-251657
ಕಾಪು ತಾಲೂಕು: 0820-2551444
ಹೆಬ್ರಿ ತಾಲೂಕು: 08253-250201
ಉಡುಪಿ ನಗರಸಭೆ: 0820-2520306

