ಬೆಂಗಳೂರು:ಬೆಂಗಳೂರಿನ ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಗೆ (GFTS) ಇಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಭೇಟಿ ನೀಡಿ, ಸಂಸ್ಥೆಯ ಪ್ರಸ್ತುತ ಕಾರ್ಯಚಟುವಟಿಕೆಗಳು ಹಾಗೂ ಪ್ರಗತಿಯ ಕುರಿತು ಪ್ರಮುಖ ಪರಿಶೀಲನಾ ಸಭೆ ನಡೆಸಿದರು.
ತರಬೇತಿ ಶಾಲೆಯ ಆವರಣವನ್ನು ವೀಕ್ಷಿಸಿದ ಬಳಿಕ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಅವರು, ವಿಮಾನ ಚಾಲನಾ ತರಬೇತಿಯ ಗುಣಮಟ್ಟ, ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ತರಬೇತಿ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಮುಂಬರುವ ದಿನಗಳಲ್ಲಿ ಚಟುವಟಿಕೆಗಳನ್ನು ಸುಗಮಗೊಳಿಸುವ ಕುರಿತು ಸಭೆಯಲ್ಲಿ ಮಹತ್ವದ ಆಲೋಚನೆಗಳನ್ನು ಹಂಚಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್, ಇಲಾಖೆಯ ಆಯುಕ್ತರಾದ ಎಂ.ಎನ್. ಅನುಚೇತ್, ಜಕ್ಕೂರು ವಿಮಾನ ತರಬೇತಿ ಸಂಸ್ಥೆಯ ನಿರ್ದೇಶಕರಾದ ಬಸವರಾಜ್ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ಐತಿಹಾಸಿಕ ಹಿನ್ನೆಲೆ ಹಾಗೂ ಇತ್ತೀಚಿನ ಮಹತ್ವ:
ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದ ಆವರಣದಲ್ಲಿರುವ ಈ ತರಬೇತಿ ಶಾಲೆಗೆ ಸುದೀರ್ಘ ಇತಿಹಾಸವಿದೆ. ಮೈಸೂರು ಸಂಸ್ಥಾನದ ಕೊನೆಯ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರು ಉಡುಗೊರೆಯಾಗಿ ನೀಡಿದ 214 ಎಕರೆ ಭೂಮಿಯಲ್ಲಿ 1949 ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಈ ಐತಿಹಾಸಿಕ ತರಬೇತಿ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಕಳೆದ ಏಳು ದಶಕಗಳಲ್ಲಿ ಈ ಸಂಸ್ಥೆಯು ದೇಶದ ರಕ್ಷಣೆ ಮತ್ತು ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಸಾವಿರಾರು ಪೈಲಟ್‌ಗಳನ್ನು ಕೊಡುಗೆಯಾಗಿ ನೀಡಿದೆ.
ಆದರೆ, ಕಳೆದ ಕೆಲವು ವರ್ಷಗಳಿಂದ ತಾಂತ್ರಿಕ ಕಾರಣಗಳಿಂದಾಗಿ ಈ ಶಾಲೆಯ DGCA ಪರವಾನಗಿ ನವೀಕರಣಗೊಳ್ಳದೆ ಪೈಲಟ್ ತರಬೇತಿ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ನಡುವೆ, ಜಕ್ಕೂರು ವಿಮಾನ ಶಾಲೆಯನ್ನು ಸ್ಥಳಾಂತರಿಸಿ, ಈ ಜಾಗದಲ್ಲಿ ಬೃಹತ್ ಕ್ರೀಡಾ ಸಂಕೀರ್ಣ ಅಥವಾ ಜನಪ್ರತಿನಿಧಿಗಳ ಕ್ಲಬ್ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ ಎಂಬ ವದಂತಿಗಳು ಎದ್ದಿದ್ದವು. ಆದರೆ ಈ ಪ್ರಸ್ತಾವನೆಗೆ ವಾಯುಯಾನ ತಜ್ಞರು ಮತ್ತು ಪಾರಂಪರಿಕ ಸಂರಕ್ಷಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಇದೀಗ ಎಲ್ಲಾ ವಿವಾದಗಳಿಗೆ ತೆರೆ ಬಿದ್ದಿದ್ದು, ಡಿಜಿಸಿಎ (DGCA) ಸಂಸ್ಥೆಗೆ 2031ರವರೆಗೆ ಐದು ವರ್ಷಗಳ ಕಾಲ ಮರು ಪರವಾನಗಿ ನೀಡಿದೆ. ಇದರಿಂದಾಗಿ ಸ್ಥಳಾಂತರದ ಯೋಜನೆ ಸದ್ಯಕ್ಕೆ ಕೈಬಿಡಲಾಗಿದ್ದು, ಸಂಸ್ಥೆಯು ಹೊಸ ಉತ್ಸಾಹದೊಂದಿಗೆ ಪುನರಾರಂಭಗೊಳ್ಳಲು ಸಜ್ಜಾಗಿದೆ. ಈ ಮಹತ್ವದ ತಿರುವಿನ ಬೆನ್ನಲ್ಲೇ ನಡೆದ ಇಂದಿನ ಸಚಿವರ ಭೇಟಿಯು ಈ ಸಂಸ್ಥೆಯ ಹೊಸ ಪರ್ವಕ್ಕೆ ಮುನ್ನುಡಿ ಬರೆದಿದೆ.

