ಚಾಮರಾಜನಗರ: ವನ್ಯಜೀವಿ ಪ್ರೇಮಿಗಳು ಹಾಗೂ ಪ್ರವಾಸಿಗರಿಗೆ ಅರಣ್ಯ ಇಲಾಖೆಯು ಭಾರಿ ಆಘಾತ ನೀಡಿದೆ. ಕರ್ನಾಟಕದ ಪ್ರಸಿದ್ಧ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳ ಸಫಾರಿ ದರಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಈ ಪರಿಷ್ಕೃತ ದರ ಪಟ್ಟಿಯು ಸೆಪ್ಟೆಂಬರ್ 1, 2026 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ತೈಲ ಬೆಲೆ ಏರಿಕೆ ಮತ್ತು ಅರಣ್ಯ ಸಫಾರಿ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಸಫಾರಿ ಸಮಯ ವಿಸ್ತರಣೆ ಅನ್ವಯ
ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ, ಕೇವಲ ದರ ಹೆಚ್ಚಳ ಮಾತ್ರವಲ್ಲದೆ ಸಫಾರಿ ಅವಧಿಯನ್ನೂ ವಿಸ್ತರಿಸಲಾಗಿದೆ. ಈ ಹಿಂದೆ 15 ರಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದೂವರೆ ಗಂಟೆ ಇರುತ್ತಿದ್ದ ಸಫಾರಿ ಅವಧಿಯನ್ನು, ಇನ್ಮುಂದೆ 30 ರಿಂದ 35 ಕಿಲೋಮೀಟರ್ ವ್ಯಾಪ್ತಿಯೊಂದಿಗೆ ಒಟ್ಟು 3 ಗಂಟೆಗಳಿಗೆ ಹೆಚ್ಚಿಸಲಾಗಿದೆ.
ಪರಿಷ್ಕೃತ ದರಗಳ ವಿವರ ಹೀಗಿದೆ:
ಬಸ್ ಸಫಾರಿ ಶುಲ್ಕ: ಈ ಹಿಂದೆ ವಯಸ್ಕರಿಗೆ ಇದ್ದ ₹650 (ಕೆಲವೆಡೆ ₹600) ದರವನ್ನು ಈಗ ₹1,000 ಕ್ಕೆ ಹೆಚ್ಚಿಸಲಾಗಿದೆ. ಇನ್ನು ಮಕ್ಕಳಿಗೆ ಇದ್ದ ₹350 ದರವನ್ನು ₹500 ಕ್ಕೆ ನಿಗದಿಪಡಿಸಲಾಗಿದೆ.
ಜೀಪ್ ಸಫಾರಿ ಶುಲ್ಕ: ಜೀಪ್ ಸಫಾರಿ ಮಾಡಲು ಬಯಸುವ ವಯಸ್ಕರಿಗೆ ಇದ್ದ ₹1,000 ದರವನ್ನು ₹1,500 ಕ್ಕೆ ಹಾಗೂ ಮಕ್ಕಳಿಗೆ ಇದ್ದ ಶುಲ್ಕವನ್ನು ₹750 ಕ್ಕೆ ಏರಿಸಲಾಗಿದೆ. (ಮೂರು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕ ಇರುವುದಿಲ್ಲ).
ಕ್ಯಾಮೆರಾ ಬಳಕೆ: ವನ್ಯಜೀವಿಗಳ ಛಾಯಾಗ್ರಹಣ ಮಾಡುವವರಿಗೆ ಹೊಸ ನಿಯಮ ಅನ್ವಯವಾಗಲಿದೆ. 200 ಎಂಎಂ ಲೆನ್ಸ್ಗಿಂತ ಹೆಚ್ಚಿನ ಸಾಮರ್ಥ್ಯದ ಕ್ಯಾಮೆರಾಗಳನ್ನು ಬಳಸಲು ₹1,500 ಜೊತೆಗೆ 18% ಜಿಎಸ್ಟಿ ಪಾವತಿಸಬೇಕಾಗುತ್ತದೆ. 200 ಎಂಎಂ ಒಳಗಿನ ಸಾಮಾನ್ಯ ಕ್ಯಾಮೆರಾಗಳಿಗೆ ಶುಲ್ಕ ವಿನಾಯಿತಿ ಮುಂದುವರಿಯಲಿದೆ.
ವಾಹನ ನಿಲುಗಡೆ ಮತ್ತು ಪ್ರವೇಶ: ಅರಣ್ಯ ವಲಯದೊಳಗೆ ಪ್ರವೇಶಿಸುವ ಖಾಸಗಿ ಕಾರುಗಳಿಗೆ ₹100, ಲಘು ವಾಣಿಜ್ಯ ವಾಹನಗಳಿಗೆ (LCV) ₹200 ಮತ್ತು ಪ್ರವಾಸಿ ಬಸ್ಗಳಿಗೆ ₹300 ಶುಲ್ಕ ನಿಗದಿಪಡಿಸಲಾಗಿದೆ.
ಸ್ಥಳೀಯರು ಮತ್ತು ಪ್ರವಾಸಿಗರಿಂದ ಬೇಸರ
ಅರಣ್ಯ ಇಲಾಖೆಯ ಈ ದಿಢೀರ್ ದರ ಏರಿಕೆ ನಿರ್ಧಾರಕ್ಕೆ ಪ್ರವಾಸಿಗರು ಹಾಗೂ ಪ್ರಕೃತಿ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸಫಾರಿ ದರಗಳು ಬಹುತೇಕ ದುಪ್ಪಟ್ಟಾಗಿರುವುದರಿಂದ ಮಧ್ಯಮ ವರ್ಗದ ಕುಟುಂಬಗಳು ಮತ್ತು ಸ್ಥಳೀಯರು ಪ್ರಕೃತಿಯ ಸೌಂದರ್ಯವನ್ನು ಸವಿಯುವ ಅವಕಾಶದಿಂದ ವಂಚಿತರಾಗಬೇಕಾಗುತ್ತದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

