Mon. Jul 27th, 2026

ಪ್ರಕೃತಿ ಪ್ರೇಮಿಗಳಿಗೆ ಶಾಕ್: ಸೆಪ್ಟೆಂಬರ್‌ನಿಂದ ಬಂಡೀಪುರ, ನಾಗರಹೊಳೆ ಸಫಾರಿ ದರ ಭಾರಿ ಏರಿಕೆ

Share this with Friends

ಚಾಮರಾಜನಗರ: ವನ್ಯಜೀವಿ ಪ್ರೇಮಿಗಳು ಹಾಗೂ ಪ್ರವಾಸಿಗರಿಗೆ ಅರಣ್ಯ ಇಲಾಖೆಯು ಭಾರಿ ಆಘಾತ ನೀಡಿದೆ. ಕರ್ನಾಟಕದ ಪ್ರಸಿದ್ಧ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳ ಸಫಾರಿ ದರಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಈ ಪರಿಷ್ಕೃತ ದರ ಪಟ್ಟಿಯು ಸೆಪ್ಟೆಂಬರ್ 1, 2026 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ತೈಲ ಬೆಲೆ ಏರಿಕೆ ಮತ್ತು ಅರಣ್ಯ ಸಫಾರಿ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಸಫಾರಿ ಸಮಯ ವಿಸ್ತರಣೆ ಅನ್ವಯ

ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ, ಕೇವಲ ದರ ಹೆಚ್ಚಳ ಮಾತ್ರವಲ್ಲದೆ ಸಫಾರಿ ಅವಧಿಯನ್ನೂ ವಿಸ್ತರಿಸಲಾಗಿದೆ. ಈ ಹಿಂದೆ 15 ರಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದೂವರೆ ಗಂಟೆ ಇರುತ್ತಿದ್ದ ಸಫಾರಿ ಅವಧಿಯನ್ನು, ಇನ್ಮುಂದೆ 30 ರಿಂದ 35 ಕಿಲೋಮೀಟರ್‌ ವ್ಯಾಪ್ತಿಯೊಂದಿಗೆ ಒಟ್ಟು 3 ಗಂಟೆಗಳಿಗೆ ಹೆಚ್ಚಿಸಲಾಗಿದೆ.

ಪರಿಷ್ಕೃತ ದರಗಳ ವಿವರ ಹೀಗಿದೆ:

ಬಸ್ ಸಫಾರಿ ಶುಲ್ಕ: ಈ ಹಿಂದೆ ವಯಸ್ಕರಿಗೆ ಇದ್ದ ₹650 (ಕೆಲವೆಡೆ ₹600) ದರವನ್ನು ಈಗ ₹1,000 ಕ್ಕೆ ಹೆಚ್ಚಿಸಲಾಗಿದೆ. ಇನ್ನು ಮಕ್ಕಳಿಗೆ ಇದ್ದ ₹350 ದರವನ್ನು ₹500 ಕ್ಕೆ ನಿಗದಿಪಡಿಸಲಾಗಿದೆ.

ಜೀಪ್ ಸಫಾರಿ ಶುಲ್ಕ: ಜೀಪ್ ಸಫಾರಿ ಮಾಡಲು ಬಯಸುವ ವಯಸ್ಕರಿಗೆ ಇದ್ದ ₹1,000 ದರವನ್ನು ₹1,500 ಕ್ಕೆ ಹಾಗೂ ಮಕ್ಕಳಿಗೆ ಇದ್ದ ಶುಲ್ಕವನ್ನು ₹750 ಕ್ಕೆ ಏರಿಸಲಾಗಿದೆ. (ಮೂರು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕ ಇರುವುದಿಲ್ಲ).

ಕ್ಯಾಮೆರಾ ಬಳಕೆ: ವನ್ಯಜೀವಿಗಳ ಛಾಯಾಗ್ರಹಣ ಮಾಡುವವರಿಗೆ ಹೊಸ ನಿಯಮ ಅನ್ವಯವಾಗಲಿದೆ. 200 ಎಂಎಂ ಲೆನ್ಸ್‌ಗಿಂತ ಹೆಚ್ಚಿನ ಸಾಮರ್ಥ್ಯದ ಕ್ಯಾಮೆರಾಗಳನ್ನು ಬಳಸಲು ₹1,500 ಜೊತೆಗೆ 18% ಜಿಎಸ್‌ಟಿ ಪಾವತಿಸಬೇಕಾಗುತ್ತದೆ. 200 ಎಂಎಂ ಒಳಗಿನ ಸಾಮಾನ್ಯ ಕ್ಯಾಮೆರಾಗಳಿಗೆ ಶುಲ್ಕ ವಿನಾಯಿತಿ ಮುಂದುವರಿಯಲಿದೆ.

ವಾಹನ ನಿಲುಗಡೆ ಮತ್ತು ಪ್ರವೇಶ: ಅರಣ್ಯ ವಲಯದೊಳಗೆ ಪ್ರವೇಶಿಸುವ ಖಾಸಗಿ ಕಾರುಗಳಿಗೆ ₹100, ಲಘು ವಾಣಿಜ್ಯ ವಾಹನಗಳಿಗೆ (LCV) ₹200 ಮತ್ತು ಪ್ರವಾಸಿ ಬಸ್‌ಗಳಿಗೆ ₹300 ಶುಲ್ಕ ನಿಗದಿಪಡಿಸಲಾಗಿದೆ.

ಸ್ಥಳೀಯರು ಮತ್ತು ಪ್ರವಾಸಿಗರಿಂದ ಬೇಸರ

ಅರಣ್ಯ ಇಲಾಖೆಯ ಈ ದಿಢೀರ್ ದರ ಏರಿಕೆ ನಿರ್ಧಾರಕ್ಕೆ ಪ್ರವಾಸಿಗರು ಹಾಗೂ ಪ್ರಕೃತಿ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸಫಾರಿ ದರಗಳು ಬಹುತೇಕ ದುಪ್ಪಟ್ಟಾಗಿರುವುದರಿಂದ ಮಧ್ಯಮ ವರ್ಗದ ಕುಟುಂಬಗಳು ಮತ್ತು ಸ್ಥಳೀಯರು ಪ್ರಕೃತಿಯ ಸೌಂದರ್ಯವನ್ನು ಸವಿಯುವ ಅವಕಾಶದಿಂದ ವಂಚಿತರಾಗಬೇಕಾಗುತ್ತದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

 


Share this with Friends

Related Post