ಅಯೋಧ್ಯೆ:ಹಸಿರು ವನಸಿರಿಯಿಂದ ಕಂಗೊಳಿಸುತ್ತಿರುವ ಅಯೋಧ್ಯೆಯ ಭವ್ಯ ಶ್ರೀರಾಮ ಜನ್ಮಭೂಮಿ ಮಂದಿರದ ಆವರಣವು ಇದೀಗ ಆಧ್ಯಾತ್ಮಿಕ ಹಾಗೂ ನೈಸರ್ಗಿಕ ಸೌಂದರ್ಯದ ಅಪೂರ್ವ ಸಂಗಮವಾಗಿ ಭಕ್ತರನ್ನು ಸೆಳೆಯುತ್ತಿದೆ. ಮಂದಿರದ ಹಚ್ಚ ಹಸಿರಿನ ಪರಿಸರದಲ್ಲಿ ತಲೆ ಎತ್ತಿ ನಿಂತಿರುವ ಭವ್ಯ ರಾಮಮಂದಿರ ಮತ್ತು ಜಟಾಯುವಿನ ಬೃಹತ್ ರಾಜಗಾಂಭೀರ್ಯದ ಪ್ರತಿಮೆಯು ಭಕ್ತಿ, ತ್ಯಾಗ ಮತ್ತು ಧರ್ಮನಿಷ್ಠೆಯ ಅಮರ ಕಾವ್ಯವನ್ನು ಕಣ್ಣಿಗೆ ಕಟ್ಟುವಂತೆ ಸಾಟುತಿವೆ.
ತ್ಯಾಗ ಮತ್ತು ಸಮರ್ಪಣೆಯ ಸಂಕೇತ ಜಟಾಯು:
ರಾಮಾಯಣದ ಇತಿಹಾಸದಲ್ಲಿ ಸೀತಾದೇವಿಯನ್ನು ರಕ್ಷಿಸಲು ರಾವಣನೊಂದಿಗೆ ಹೋರಾಡಿ ಪ್ರಾಣತ್ಯಾಗ ಮಾಡಿದ ಪರಮ ಭಕ್ತ ಜಟಾಯುವಿನ ಈ ವಿರಾಟ ಮೂರ್ತಿಯು ಮಂದಿರದ ಆವರಣಕ್ಕೆ ಬರುವ ಭಕ್ತರಲ್ಲಿ ಭಕ್ತಿಭಾವವನ್ನು ಮತ್ತಷ್ಟು ಉತ್ತುಂಗಕ್ಕೇರಿಸುತ್ತದೆ. ಪ್ರಭು ಶ್ರೀರಾಮನ ಮೇಲಿನ ಅಚಲ ಭಕ್ತಿ ಮತ್ತು ಧರ್ಮ ರಕ್ಷಣೆಗಾಗಿ ತನ್ನ ರೆಕ್ಕೆಗಳನ್ನೇ ಕಳೆದುಕೊಂಡ ಜಟಾಯುವಿನ ಸಾಹಸ ಹಾಗೂ ಬಲಿದಾನದ ಕಥೆಯನ್ನು ಈ ಶಿಲ್ಪಕಲೆಯು ನೆನಪಿಸುತ್ತಿದೆ.
ನಿಸರ್ಗದ ಮಡಿಲಲ್ಲಿ ದಿವ್ಯ ದರ್ಶನ:
ಇಡೀ ರಾಮಜನ್ಮಭೂಮಿ ಸಂಕೀರ್ಣವನ್ನು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗಿದ್ದು, ಸುತ್ತಲೂ ಬೆಳೆಸಿರುವ ಹಸಿರು ವನರಾಶಿಯು ಮಂದಿರದ ದಿವ್ಯತೆಯನ್ನು ಇಮ್ಮಡಿಗೊಳಿಸಿದೆ. ಆಧುನಿಕತೆಯ ನಡುವೆಯೂ ತ್ರೇತಾಯುಗದ ನೈಸರ್ಗಿಕ ತಪೋವನದ ವಾತಾವರಣವನ್ನು ಇಲ್ಲಿ ಮರುಸೃಷ್ಟಿಸಲಾಗಿದೆ.
ಅಯೋಧ್ಯೆಗೆ ಆಗಮಿಸುವ ಪ್ರತಿಯೊಬ್ಬ ಭಕ್ತನಿಗೂ ಈ ಹಸಿರಿನ ನಡುವಿನ ಭವ್ಯ ಮಂದಿರ ಹಾಗೂ ಜಟಾಯುವಿನ ದರ್ಶನವು ಕೇವಲ ಧಾರ್ಮಿಕ ಪ್ರವಾಸವಾಗಿರದೆ, ಸನಾತನ ಧರ್ಮದ ತ್ಯಾಗ ಮತ್ತು ಕರ್ತವ್ಯ ನಿಷ್ಠೆಯ ಆದರ್ಶಗಳನ್ನು ಮನದಟ್ಟು ಮಾಡುವ ದಿವ್ಯ ಅನುಭೂತಿಯಾಗಿದೆ.

