Fri. Aug 7th, 2026

ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ಅಂಗೀಕಾರ: ಬದಲಿ ವ್ಯವಸ್ಥೆಯಾಗುವವರೆಗೂ ಅವರೇ ಮುಂದುವರಿಕೆ – ಸಿಎಂ ಡಿ.ಕೆ. ಶಿವಕುಮಾರ್

Share this with Friends

ಬೆಂಗಳೂರು:ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಆದರೆ, ಮೇಲ್ಮನೆಗೆ ನೂತನ ಸಭಾಪತಿಗಳ ಆಯ್ಕೆಯ ಬದಲಿ ವ್ಯವಸ್ಥೆ ಪೂರ್ಣಗೊಳ್ಳುವವರೆಗೂ ಬಸವರಾಜ ಹೊರಟ್ಟಿ ಅವರನ್ನೇ ಆ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ಕೋರಿ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಪ್ರಸಕ್ತ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಬಸವರಾಜ ಹೊರಟ್ಟಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ದೇಶದ ವಿಧಾನ ಪರಿಷತ್ ಇತಿಹಾಸದಲ್ಲೇ ಅತ್ಯಂತ ಹಿರಿಯ ನಾಯಕರಾಗಿರುವ ಅವರು ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ ಎಂದು ಧನ್ಯವಾದ ಅರ್ಪಿಸಿದರು.

ಆಗಸ್ಟ್‌ 14 ರಂದು ನೂತನ ಉಪಸಭಾಪತಿ ಆಯ್ಕೆ:

ಮುಂದಿನ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿಗಳು, “ಆಗಸ್ಟ್ 13 ರಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದೆ. ಆಗಸ್ಟ್ 14 ರಂದು ನೂತನ ಉಪಸಭಾಪತಿಗಳ ಆಯ್ಕೆ ಪ್ರಕ್ರಿಯೆ ಜರುಗಲಿದೆ. ತದನಂತರ ಉಪಸಭಾಪತಿಗಳ ಮೂಲಕವೇ ನೂತನ ಸಭಾಪತಿಗಳ ಅಧಿಕೃತ ಚುನಾವಣೆ ನಡೆಯಲಿದೆ” ಎಂದು ಸ್ಪಷ್ಟಪಡಿಸಿದರು. ರಾಜೀನಾಮೆ ಅಂಗೀಕಾರವಾಗಿದ್ದರೂ ಹೊಸ ಆಯ್ಕೆಯಾಗುವವರೆಗೆ ಹೊರಟ್ಟಿ ಅವರೇ ಹಂಗಾಮಿ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದರು.

ಅವಿಶ್ವಾಸ ನಿರ್ಣಯ ಅಪ್ರಸ್ತುತ:

ಹೊರಟ್ಟಿ ಅವರ ವಿರುದ್ಧ ಈ ಮುನ್ನ ಕೇಳಿಬಂದಿದ್ದ ಅವಿಶ್ವಾಸ ನಿರ್ಣಯ ಮಂಡನೆಯ ಕುರಿತು ಉತ್ತರಿಸಿದ ಅವರು, “ಸರ್ಕಾರ ಮತ್ತು ಹೊರಟ್ಟಿ ಅವರ ನಡುವೆ ಸೌಹಾರ್ದಯುತ ಒಪ್ಪಂದ ಏರ್ಪಟ್ಟ ಮೇಲೆ ಅವಿಶ್ವಾಸದ ಪ್ರಶ್ನೆಯೇ ಬಾರದು, ಅದು ಈಗ ಅಪ್ರಸ್ತುತ. ಹೊರಟ್ಟಿ ಅವರು ಅತ್ಯಂತ ಶಿಸ್ತಿನ ಮನುಷ್ಯ ಸಭಾಪತಿ ಸ್ಥಾನದ ಘನತೆಯನ್ನು ಹೆಚ್ಚಿಸಿದ್ದಾರೆ. ಎಲ್ಲಾ ಸಂದರ್ಭಗಳಲ್ಲೂ ಸರ್ಕಾರದ ಗೌರವ ಕಾಪಾಡಿಕೊಂಡು ಬಂದಿರುವ ಅವರ ನಡೆ ನಮಗೆಲ್ಲರಿಗೂ ಹೆಮ್ಮೆ ತಂದಿದೆ” ಎಂದು ಪ್ರಶಂಸಿಸಿದರು.

ಮೇಲ್ಮನೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಮುಗಿದ ಬಳಿಕ ಸದನದ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುವ ಆಸೆಯನ್ನು ಬಸವರಾಜ ಹೊರಟ್ಟಿಯವರು ವ್ಯಕ್ತಪಡಿಸಿದ್ದು, ಅವರ ಭಾವನೆಗಳನ್ನು ಸರ್ಕಾರ ಗೌರವಿಸುತ್ತದೆ ಎಂದು ಸಿಎಂ ತಿಳಿಸಿದರು.

ಇದುವರೆಗೂ ಸಭಾಪತಿಗಳ ಬದಲಾವಣೆಯಾಗಿರಲಿಲ್ಲ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅವರು ಬೇರೆ ರಾಜ್ಯಗಳಲ್ಲಿ ಏನೆಲ್ಲಾ ಮಾಡಿದ್ದಾರೆ ಪಟ್ಟಿ ನೀಡಲೇ? ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಇದು ನಮ್ಮ ಹಾಗೂ ಹೊರಟ್ಟಿ ಅವರ ನಡುವಣ ವಿಚಾರ. ಶೆಟ್ಟರ್ ಅವರು ಇದ್ದಾಗ, ಹೊರಟ್ಟಿ ಅವರನ್ನು ಸಭಾಪತಿ ಮಾಡಿದಾಗ ನಡೆದ ಘಟನೆ ಏನು? ಮರೆತು ಹೋಯಿತೇ? ಮಾಧ್ಯಮಗಳಲ್ಲಿ ಅವುಗಳ ದೃಶ್ಯಾವಳಿ ಇರಬೇಕಲ್ಲವೇ, ಮರುಪ್ರಸಾರ ಮಾಡಿ” ಎಂದರು.


Share this with Friends

Related Post