Sun. Aug 2nd, 2026

ಕಾವೇರಿಗಾಗಿ ಆಗಸ್ಟ್ 13ರ ‘ಕರ್ನಾಟಕ ಬಂದ್’ ಅಚಲವೆಂದ ಕನ್ನಡ ಪರ ಸಂಘಟನೆಗಳು..!

Share this with Friends

ಬೆಂಗಳೂರು: ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್ ಕಾವೇರಿ ನೀರು ಹರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಖಂಡಿಸಿ ಆಗಸ್ಟ್ 13ರಂದು ನಡೆಸಲು ಉದ್ದೇಶಿಸಿರುವ ‘ಅಖಂಡ ಕರ್ನಾಟಕ ಬಂದ್’ ಹೋರಾಟದ ವಿಷಯದಲ್ಲಿ ಕನ್ನಡಪರ ಸಂಘಟನೆಗಳು ಕಠಿಣ ನಿಲುವು ತಳೆದಿವೆ., ಸಾರ್ವಜನಿಕರ ಹಿತದೃಷ್ಟಿಯಿಂದ ಬಂದ್ ನಿರ್ಧಾರದಿಂದ ಹಿಂದೆ ಸರಿಯುವಂತೆ ಮುಖ್ಯಮಂತ್ರಿಗಳು ಕಳಕಳಿಯ ವಿನಂತಿ ಮಾಡಿದ್ದರೂ ಅದನ್ನು ಒಪ್ಪಲು ಸಿದ್ದರಿಲ್ಲದೆ ಬಂದ್ ಅಚಲದ ಘೋಷಣೆ ಮೊಳಗಿಸಿದ್ದಾರೆ.

ಬಂದ್ ಖಚಿತ ಎಂದ ನಾಯಕರು: ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಆಗಸ್ಟ್ 13ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಇಡೀ ರಾಜ್ಯಾದ್ಯಂತ ಪೂರ್ಣ ಪ್ರಮಾಣದ ಬಂದ್ ಆಚರಿಸಲು ನಿರ್ಣಯಿಸಲಾಗಿದೆ. “ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದ್ದು, ಯಾವುದೇ ಮುಲಾಜಿಲ್ಲದೆ ತಮಿಳುನಾಡಿಗೆ ನೀರು ನಿಲ್ಲಿಸಬೇಕು” ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.

ಪ್ರಮುಖ ನಾಯಕರ ಬೆಂಬಲ: ಈ ಹೋರಾಟಕ್ಕೆ ಚಲನಚಿತ್ರ ರಂಗದ ಪ್ರಮುಖರಾದ ಜಯಮಾಲಾ, ಕನ್ನಡಪರ ಹೋರಾಟಗಾರರಾದ ಸಾ. ರಾ. ಗೋವಿಂದು, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಶಿವರಾಮೇಗೌಡ, ಮತ್ತು ಕನ್ನಡ ಜಾಗೃತಿ ವೇದಿಕೆಯ ಮಂಜುನಾಥ್ ಯಾದವ್ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಸಂಘಟನೆಗಳ ಪ್ರಮುಖರು ಜಂಟಿಯಾಗಿ ಬೆಂಬಲ ಘೋಷಿಸಿದ್ದಾರೆ. ವಿಮಾನ ನಿಲ್ದಾಣ ಮುತ್ತಿಗೆ ಸೇರಿದಂತೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಸಂಘಟನೆಗಳು ಎಚ್ಚರಿಸಿವೆ.

ಬಂದ್ ಕೈಬಿಡುವಂತೆ ಸಿಎಂ ಡಿ.ಕೆ. ಶಿವಕುಮಾರ್ ನಮ್ರತೆಯ ಮನವಿ

ಸರ್ವಪಕ್ಷ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ನಾನು ಕೂಡ ಕಾವೇರಿ ಕಣಿವೆಯ ರೈತನ ಮಗ. ರಾಜ್ಯದ ಹಿತ ಕಾಯಲು ಸರ್ಕಾರ ಕಾನೂನು ಚೌಕಟ್ಟಿನಲ್ಲಿ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಬಂದ್ ಆಚರಿಸುವುದರಿಂದ ಯಾರಿಗೂ ಲಾಭವಿಲ್ಲ, ಬದಲಾಗಿ ಸಾಮಾನ್ಯ ಜನರ ದಿನಗೂಲಿ ಮತ್ತು ಸಾರ್ವಜನಿಕ ಸಾರಿಗೆಗೆ ತೊಂದರೆಯಾಗುತ್ತದೆ. ದಯವಿಟ್ಟು ಬಂದ್ ನಿರ್ಧಾರವನ್ನು ಕೈಬಿಡಿ” ಎಂದು ನಮ್ರತೆಯಿಂದ ಮನವಿ ಮಾಡಿಕೊಂಡಿದ್ದಾರೆ. ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಒಟ್ಟಾಗಿ ಸರ್ಕಾರದ ನಿಲುವಿಗೆ ಬೆಂಬಲ ಸೂಚಿಸಿದ್ದಾರೆ. ನಾವು ಎಲ್ಲಾ ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ಮತ್ತೊಮ್ಮೆ ನೇರವಾಗಿ ಮಾತುಕತೆ ನಡೆಸಲಿದ್ದೇವೆ. ಹೀಗಾಗಿ ಆರ್ಥಿಕತೆಗೆ ಹೊರೆಯಾಗುವ ಬಂದ್ ನಡೆಸಬೇಡಿ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.ಆದರೆ ಸರ್ಕಾರದ ಮನವಿಗೆ ಕನ್ನಡಪರ ಸಂಘಟನೆಗಳು ಒಪ್ಪದೆ ಬಂದ್ ಗೆ ಮುಂದಾಗಿದ್ದಾರೆ.

 

 


Share this with Friends

Related Post