Sun. Aug 2nd, 2026

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್: ನಾಳೆ ಸೋಮವಾರ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ನಿಶ್ಚಿತ?

Share this with Friends

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಕೊನೆಗೂ ಚಾಲನೆ ಸಿಕ್ಕಿದ್ದು, ನಾಳೆ ಸೋಮವಾರ ಸಂಜೆ 4 ಗಂಟೆಗೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ತಿಳಿದುಬಂದಿದೆ.

 ನವದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ನಡೆದ ಸುದೀರ್ಘ ಸರಣಿ ಸಭೆಗಳ ಬಳಿಕ ಸಂಭಾವ್ಯ ಸಚಿವರ ಅಂತಿಮ ಪಟ್ಟಿ ಸಿದ್ಧಗೊಂಡಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ. ಹಿರಿಯ ನಾಯಕ ಎನ್.ಎಸ್. ಬೋಸರಾಜು ಅವರು ಸಹ ಮಾಹಿತಿ ನೀಡಿ, ನಾಳೆ ಸೋಮವಾರ ಸಂಪುಟ ವಿಸ್ತರಣೆಯು ಶೇಕಡಾ 99 ರಷ್ಟು ನಡೆಯುವುದು ನಿಶ್ಚಿತ ಎಂದು ತಿಳಿಸಿದ್ದಾರೆ.

ಹೈಕಮಾಂಡ್ ಹಸಿರು ನಿಶಾನೆ: ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಹಿರಿಯ ನಾಯಕರ ಸಮ್ಮುಖದಲ್ಲಿ ನಡೆದ ಸುದೀರ್ಘ ಸಭೆಗಳ ಬಳಿಕ ರಾಜ್ಯ ಸಂಪುಟ ಸೇರಲಿರುವ ಶಾಸಕರ ಪಟ್ಟಿ ಅಂತಿಮಗೊಂಡಿದೆ ಎನ್ನಲಾಗಿದ್ದು,ಪಟ್ಟಿ ಸಿದ್ಧವಾಗುತ್ತಿದ್ದಂತೆಯೇ ಹೈಕಮಾಂಡ್‌ನ ಪ್ರಧಾನ ಕಾರ್ಯದರ್ಶಿಗಳು ಮುಖ್ಯಮಂತ್ರಿಗಳಿಗೆ ಸಂಪರ್ಕಿಸಿ, ಅಧಿಕೃತ ಸಚಿವರ ಪಟ್ಟಿಯನ್ನು ಶೀಘ್ರದಲ್ಲೇ ರವಾನಿಸಲಿದ್ದಾರೆ ಹಾಗೂ ನಾಳೆ ಸಂಜೆ 4 ಗಂಟೆಗೆ ನಿಗದಿಯಾಗಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರಿಗೆ ಹೈಕಮಾಂಡ್ ಉಸ್ತುವಾರಿ: ಹೈಕಮಾಂಡ್ ಅನುಮೋದಿಸಿರುವ ಅಂತಿಮ ಪಟ್ಟಿಯೊಂದಿಗೆ ರಾಜ್ಯ ಉಸ್ತುವಾರಿಗಳು ಇಂದು ಭಾನುವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸುತ್ತಿದ್ದು, ಮುಖ್ಯಮಂತ್ರಿಗಳೊಂದಿಗೆ ಕೊನೆಯ ಹಂತದ ಸಮಾಲೋಚನೆ ನಡೆಸಲಿದ್ದಾರೆ. ಹೊಸದಾಗಿ 18 ರಿಂದ 20 ಶಾಸಕರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಸಂಭಾವ್ಯ ನಾಯಕರ ಪಟ್ಟಿಯಲ್ಲಿರುವ ಪ್ರಮುಖ ಹೆಸರುಗಳು:

ಹೊಸ ಸಂಪುಟದಲ್ಲಿ ಪ್ರಾದೇಶಿಕ ಸಮತೋಲನ, ಹಿರಿಯ ಮತ್ತು ಕಿರಿಯ ಶಾಸಕರ ಜಾತಿ ಸಮೀಕರಣಕ್ಕೆ ಹೈಕಮಾಂಡ್ ಭಾರಿ ಕಸರತ್ತು ನಡೆಸಿದೆ. ಶಾಸಕರಾದ ತನ್ವೀರ್ ಸೇಠ್, ಪಿ.ಎಂ. ನರೇಂದ್ರಸ್ವಾಮಿ, ಶರತ್ ಬಚ್ಚೇಗೌಡ, ಬಸವಂತಪ್ಪ ಮತ್ತು ಕನೀಜ್ ಫಾತಿಮಾ ಅವರ ಹೆಸರುಗಳು ಸಚಿವ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ. ಸಚಿವ ಸ್ಥಾನದ ಆಕಾಂಕ್ಷಿಗಳಾದ ಯಶವಂತರಾಯಗೌಡ ಪಾಟೀಲ, ಅಪ್ಪಾಜಿ ನಾಡಗೌಡ, ರಿಜ್ವಾನ್ ಅರ್ಷದ್, ವಿಜಯಾನಂದ ಕಾಶಪ್ಪನವರ್, ಎ.ಎಸ್. ಪೊನ್ನಣ್ಣ ಮತ್ತು ಅಶೋಕ್ ಎಸ್. ಪಟ್ಟಣ ಅವರು ಹಿರಿಯ ನಾಯಕರ ನಿವಾಸಗಳಿಗೆ ಭೇಟಿ ನೀಡಿ ಕೊನೆಯ ಕ್ಷಣದ ರಾಜಕೀಯ ಸಮಾಲೋಚನೆ ನಡೆಸಿದ್ದಾರೆ. ಮತ್ತೊಂದೆಡೆ ಹಿರಿಯ ನಾಯಕ ಬಸವರಾಜ ರಾಯರೆಡ್ಡಿ ಅವರಿಗೆ ಸ್ಪೀಕರ್ ಹುದ್ದೆಯ ಜವಾಬ್ದಾರಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಅಧಿವೇಶನದ ಮುನ್ನ ಸಿದ್ಧತೆ: ಮುಂಬರುವ ಆಗಸ್ಟ್ 13 ರಿಂದ ರಾಜ್ಯದ ಮುಂಗಾರು ಜಂಟಿ ಅಧಿವೇಶನ ಆರಂಭವಾಗುತ್ತಿರುವುದರಿಂದ, ಅದಕ್ಕೂ ಮುನ್ನವೇ ಪೂರ್ಣ ಪ್ರಮಾಣದ ಸಂಪುಟ ರಚಿಸಿ ವಿರೋಧ ಪಕ್ಷಗಳ ಮುಖಾಮುಖಿಗೆ ಸಿದ್ಧವಾಗಲು ಆಡಳಿತಾರೂಢ ಸರ್ಕಾರ ನಿರ್ಧರಿಸಿದೆ. ನಾಳೆ ಸೋಮವಾರ ಮುಂಜಾನೆಯ ವೇಳೆಗೆ ಅಧಿಕೃತವಾಗಿ ಯಾರಿಗೆಲ್ಲಾ ಸಚಿವ ಸ್ಥಾನ ಸಿಕ್ಕಿದೆ ಎಂಬ ರಾಜಭವನದ ಅಧಿಕೃತ ಪಟ್ಟಿ ಹೊರಬೀಳಲಿದೆ.

 


Share this with Friends

Related Post