Sat. Jun 6th, 2026

“ಕೇರಳದಲ್ಲಿ ಜಮೀರ್ ಸ್ಟಾರ್ ಪ್ರಚಾರಕ, ಇಲ್ಲಿ ಗಬ್ಬರ್ ಸಿಂಗ್”: ಆರ್. ಅಶೋಕ್ ಲೇವಡಿ

Share this with Friends

ದಾವಣಗೆರೆ: “ಸಚಿವ ಜಮೀರ್ ಅಹ್ಮದ್ ಇಲ್ಲಿಂದ ಕಾಲ್ಕಿತ್ತು ಕೇರಳಕ್ಕೆ ಓಡಿಹೋಗಿದ್ದಾರೆ. ಅಲ್ಲಿ ಅವರು ಸ್ಟಾರ್ ಪ್ರಚಾರಕರಿರಬಹುದು, ಆದರೆ ದಾವಣಗೆರೆಯಲ್ಲಿ ಅವರು ‘ನೋ ಸ್ಟಾರ್’, ಕೇವಲ ‘ಗಬ್ಬರ್ ಸಿಂಗ್’ ಅಷ್ಟೆ,” ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ವ್ಯಂಗ್ಯವಾಡಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು ಮತ್ತು ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದರು.

ಕುಟುಂಬ ರಾಜಕಾರಣಕ್ಕೆ ಟೀಕೆ:

“ಕ್ಷೇತ್ರದಲ್ಲಿ ಒಂದೇ ಕುಟುಂಬದ ಕೈಗೆ ಅಧಿಕಾರ ಸಿಕ್ಕರೆ ದರ್ಪ ಹೆಚ್ಚಾಗುತ್ತದೆ. ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಗುಣ ಮಾಯವಾಗಿ, ಮಾತಿನ ಶೈಲಿಯೇ ಬದಲಾಗುತ್ತದೆ. ಈ ಸರ್ವಾಧಿಕಾರಿ ಧೋರಣೆಯನ್ನು ಮತದಾರರು ದಿಕ್ಕರಿಸಬೇಕು,” ಎಂದ ಅಶೋಕ್, ಕಾಂಗ್ರೆಸ್‌ನ ಕುಟುಂಬ ರಾಜಕಾರಣವನ್ನು ತೀವ್ರವಾಗಿ ಟೀಕಿಸಿದರು. ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರಿಗೆ ಅಥವಾ ಅಲ್ಪಸಂಖ್ಯಾತರಿಗೆ ಟಿಕೆಟ್ ಸಿಗಬಹುದು ಎಂಬ ಆಸೆ ಈ ಬಾರಿಯೂ ಹುಸಿಯಾಗಿದೆ ಎಂದು ಅವರು ವ್ಯಂಗ್ಯವಾಡಿದರು.

ದಲಿತ ಮುಖಂಡನಿಗೆ ಬಿಜೆಪಿ ಮಣೆ:

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಅವರನ್ನು ಶ್ಲಾಘಿಸಿದ ಅಶೋಕ್, “ಬಿಜೆಪಿ ಸಾಮಾನ್ಯ ದಲಿತ ಮುಖಂಡನನ್ನು ಗುರುತಿಸಿ ಟಿಕೆಟ್ ನೀಡಿದೆ. ಅವರು ಈ ಕ್ಷೇತ್ರದ ಮನೆಯ ಮಗನಾಗಿ ಕೆಲಸ ಮಾಡಲಿದ್ದಾರೆ. ಕ್ಷೇತ್ರದಲ್ಲಿ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಶಿಕ್ಷಣ ಮತ್ತು ಸುಗಮ ಸಂಪರ್ಕಕ್ಕೆ ಬಿಜೆಪಿ ಆದ್ಯತೆ ನೀಡಲಿದೆ,” ಎಂದು ಭರವಸೆ ನೀಡಿದರು.

ಅಲ್ಪಸಂಖ್ಯಾತರ ಅಸಮಾಧಾನ:

“ಶಾಮನೂರು ಕುಟುಂಬಕ್ಕೆ ಮತ್ತೆ ಟಿಕೆಟ್ ನೀಡಿರುವುದರಿಂದ ಮುಂದಿನ ಎರಡು ತಲೆಮಾರುಗಳವರೆಗೆ ಬೇರೆ ಯಾರಿಗೂ ಅವಕಾಶ ಸಿಗದಂತಾಗಿದೆ. ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರನ್ನು ಕಡೆಗಣಿಸಲಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತರೆ ಮಾತ್ರ ಇತರರಿಗೆ ರಾಜಕೀಯ ಅವಕಾಶಗಳು ತೆರೆದುಕೊಳ್ಳಲಿವೆ,” ಎಂದು ವಿಶ್ಲೇಷಿಸಿದರು. ಅಧಿಕಾರ ಒಂದೇ ಕುಟುಂಬಕ್ಕೆ ಸೀಮಿತವಾಗಬಾರದು, ಜನರಿಗೆ ಅಭಿವೃದ್ಧಿ ಬೇಕಿದೆ ಎಂದು ಅವರು ಒತ್ತಿ ಹೇಳಿದರು.

ಸಾಲದ ಸುಳಿಯಲ್ಲಿ ಕರ್ನಾಟಕ:

ರಾಜ್ಯದ ಸಾಲದ ಕುರಿತು ಅಂಕಿ-ಅಂಶಗಳನ್ನು ನೀಡಿದ ಅವರು, “ಕೆ.ಸಿ. ರೆಡ್ಡಿಯವರಿಂದ ಬಸವರಾಜ ಬೊಮ್ಮಾಯಿಯವರ ಕಾಲದವರೆಗೆ ರಾಜ್ಯದ ಸಾಲದ ಪ್ರಮಾಣ ಶೇ. 40 ರಷ್ಟಿದ್ದರೆ, ಸಿದ್ದರಾಮಯ್ಯ ಅವರೊಬ್ಬರೇ ಶೇ. 60 ರಷ್ಟು ಸಾಲ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಹಣವನ್ನು ಲಪಟಾಯಿಸಲಾಗುತ್ತಿದೆ. ಯಾವುದೇ ಹೊಸ ಬಸ್ ನಿಲ್ದಾಣಗಳ ನಿರ್ಮಾಣವಾಗಿಲ್ಲ, ಶಿಕ್ಷಕರ ನೇಮಕಾತಿಯಿಲ್ಲ, ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇಷ್ಟೆಲ್ಲಾ ವೈಫಲ್ಯಗಳನ್ನಿಟ್ಟುಕೊಂಡು ಯಾವ ಮುಖ ಹೊತ್ತು ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಮತ ಕೇಳುತ್ತೀರಿ?” ಎಂದು ಪ್ರಶ್ನಿಸಿದರು.

ಹಿಂದಿ ಭಾಷಾ ವಿವಾದ ಮತ್ತು ಕಾಂಗ್ರೆಸ್ ದ್ವಂದ್ವ:

ತ್ರಿಭಾಷಾ ಸೂತ್ರದ ಕುರಿತು ಮಾತನಾಡಿದ ಅವರು, “ಗಾಂಧೀಜಿಯವರು ಹಿಂದಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದರು. ನೆಹರು ಮತ್ತು ಇಂದಿರಾ ಗಾಂಧಿಯವರು ಹಿಂದಿ ಪ್ರಚಾರಕ್ಕೆ ಪ್ರೋತ್ಸಾಹ ನೀಡಿದ್ದರು. ಈಗ ಕಾಂಗ್ರೆಸ್ಸಿಗರು ಹಿಂದಿ ಕಡ್ಡಾಯವಲ್ಲ ಎನ್ನುತ್ತಿದ್ದಾರೆ. ಒಂದು ವೇಳೆ ಹಿಂದಿ ಕಡ್ಡಾಯವಲ್ಲ ಎಂದಾದರೆ ಅದನ್ನು ಪರೀಕ್ಷೆಯ ಸಮಯದಲ್ಲಿ ಹೇಳುವ ಬದಲು, ಶಾಲಾ ವರ್ಷದ ಆರಂಭದಲ್ಲೇ ಹೇಳಬೇಕಿತ್ತು,” ಎಂದು ಕುಟುಕಿದರು.

ಜಮೀರ್ ವಿರುದ್ಧ ವ್ಯಂಗ್ಯ:

ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅಶೋಕ್, “ಸಚಿವ ಜಮೀರ್ ಅಹ್ಮದ್ ಇಲ್ಲಿಂದ ಕಾಲ್ಕಿತ್ತು ಕೇರಳಕ್ಕೆ ಓಡಿ ಹೋಗಿದ್ದಾರೆ. ಅಲ್ಲಿ ಅವರು ಸ್ಟಾರ್ ಪ್ರಚಾರಕರಿರಬಹುದು, ಆದರೆ ಇಲ್ಲಿ ಅವರು ‘ನೋ ಸ್ಟಾರ್’, ಕೇವಲ ‘ಗಬ್ಬರ್ ಸಿಂಗ್’ ಅಷ್ಟೆ,” ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ದ್ರೋಹ ಬಗೆದಿದ್ದು, ಆ ಸಮುದಾಯದ ಮತಗಳು ಈ ಬಾರಿ ಬಿಜೆಪಿಗೆ ಸಿಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿಯವರು ಮಾಡಿದ ಸಾಲ ದೇಶದ ಅಭಿವೃದ್ಧಿಗೆ ಬಳಕೆಯಾಗಿದೆ, ಆದರೆ ಸಿದ್ದರಾಮಯ್ಯ ಮಾಡಿದ ಸಾಲ ಎಲ್ಲಿ ಹೋಯಿತು ಎಂದು ಅವರು ಪ್ರಶ್ನಿಸಿದರು.

 


Share this with Friends

Related Post