Fri. Jun 5th, 2026

ಅಸ್ಸಾಂನಲ್ಲಿ ‘ಹಿಟ್ಲರ್’ ಆಡಳಿತಕ್ಕೆ ಅಂತ್ಯ ಹಾಡಿ: ಗುವಾಹಟಿಯಲ್ಲಿ ಡಿ.ಕೆ. ಶಿವಕುಮಾರ್ ಗುಡುಗು

Share this with Friends

ಗುವಾಹಟಿ: “ಅಸ್ಸಾಂನಲ್ಲಿ ಈಗ ಬದಲಾವಣೆಯ ಕಾಲ ಬಂದಿದೆ. ಇಡೀ ರಾಜ್ಯವು ಹಿಟ್ಲರ್ ಮಾದರಿಯ ಆಡಳಿತದಿಂದ ಮುಕ್ತಿ ಪಡೆಯಲು ಬಯಸುತ್ತಿದ್ದು, ಈ ದಬ್ಬಾಳಿಕೆಗೆ ಅಂತ್ಯ ಹಾಡುವ ಸನ್ನಿವೇಶ ಸೃಷ್ಟಿಯಾಗಿದೆ,” ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಗುವಾಹಟಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ಸಾಂನ ಪ್ರಸ್ತುತ ರಾಜಕೀಯ ಸ್ಥಿತಿಗತಿಯನ್ನು ಕಟುವಾಗಿ ಟೀಕಿಸಿದರು. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, “ನಮ್ಮ ನಾಯಕರು ಅಸ್ಸಾಂನ ಜನರ ಹಿತದೃಷ್ಟಿಯಿಂದ ವಿಶೇಷ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿದ್ದಾರೆ. ನಮಗೆ ಒಮ್ಮೆ ಅವಕಾಶ ನೀಡಿದರೆ, ದಕ್ಷ ಆಡಳಿತದ ಮೂಲಕ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುತ್ತೇವೆ. ಅಸ್ಸಾಂ ಜನತೆ ನೀಡುವ ತೀರ್ಪಿಗಾಗಿ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ,” ಎಂದು ತಿಳಿಸಿದರು.

ಕರ್ನಾಟಕದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, “ನಮ್ಮ ರಾಜ್ಯದಲ್ಲಿ 1.26 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ₹2,000 ನೀಡಲಾಗುತ್ತಿದೆ. ಅಧಿಕಾರಕ್ಕೆ ಬಂದ ಕೇವಲ ಆರು ತಿಂಗಳಲ್ಲೇ ನಾವು ನುಡಿದಂತೆ ನಡೆದಿದ್ದೇವೆ. ಈ ಯೋಜನೆಗಳಿಂದ ಆರ್ಥಿಕತೆ ಹದಗೆಡುತ್ತದೆ ಎಂದು ಟೀಕಿಸಿದ್ದ ಪ್ರಧಾನ ಮಂತ್ರಿಗಳೇ ಈಗ ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ಪಾದಯಾತ್ರೆಯ ಸಂದರ್ಭದಲ್ಲಿ ಜನರ ಕಷ್ಟಗಳನ್ನು ಕಂಡು ಈ ಯೋಜನೆಗಳನ್ನು ರೂಪಿಸಿದ್ದಾರೆ,” ಎಂದು ವಿವರಿಸಿದರು.

ಇದೇ ವೇಳೆ ಅಸ್ಸಾಂನ ಬಿಜೆಪಿ ಸರ್ಕಾರದ ವಿರುದ್ಧ ತಾರತಮ್ಯದ ಆರೋಪ ಮಾಡಿದ ಅವರು, “ಇಲ್ಲಿ ಕೇವಲ ಬಿಜೆಪಿ ಬೆಂಬಲಿತ ಮಹಿಳೆಯರಿಗೆ ಮಾತ್ರ ಯೋಜನೆಗಳನ್ನು ನೀಡಲಾಗುತ್ತಿದೆ ಎಂಬುದು ಆಶ್ಚರ್ಯದ ಸಂಗತಿ. ಬಿಜೆಪಿ ಸಮಾವೇಶಕ್ಕೆ ಬರದಿದ್ದರೆ ಸೌಲಭ್ಯ ಕಡಿತಗೊಳಿಸುವ ಬೆದರಿಕೆ ಹಾಕಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ನಾವು ಜಾತಿ, ಮತ ಅಥವಾ ಪಕ್ಷ ನೋಡದೆ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸಮಾನವಾಗಿ ಸೌಲಭ್ಯ ತಲುಪಿಸುತ್ತಿದ್ದೇವೆ,” ಎಂದರು.

ಕೊನೆಯದಾಗಿ ರಾಜ್ಯದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಅವರು, “ಅಸ್ಸಾಂನಲ್ಲಿ ಪ್ರತಿಯೊಂದು ರಸ್ತೆ ಮತ್ತು ಸೇತುವೆ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಈಗ ಬಿಜೆಪಿಯಿಂದ ಸ್ಪರ್ಧಿಸುತ್ತಿರುವವರೇ ಈ ಹಿಂದೆ ಈ ಬಗ್ಗೆ ಆರೋಪ ಮಾಡಿದ್ದರು. ಇಂತಹ ಭ್ರಷ್ಟ ವ್ಯವಸ್ಥೆಯನ್ನು ಕಿತ್ತೊಗೆಯಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಮಹಿಳೆಯರು ಮತ್ತು ಯುವಕರ ಪರವಾದ ಹೊಸ ಕಾರ್ಯಕ್ರಮಗಳನ್ನು ನಾವು ಜಾರಿಗೆ ತರಲಿದ್ದೇವೆ,” ಎಂದು ಭರವಸೆ ನೀಡಿದರು.

“ನಾನು ಅಸ್ಸಾಂ ಬಿಜೆಪಿಯ ಹಳೆಯ ನಾಯಕರನ್ನು ಕೇಳುವುದೆಂದರೆ, 2014ರ ವೇಳೆ ನೀವು ಹಿಮಂತ್ ವಿರುದ್ಧ ಮಾಡಿದ ಆರೋಪಗಳು ಏನಾದವು? ಈ ಆರೋಪಗಳಿಂದ ಹಿಮಂತ್ ಅವರು ಮುಕ್ತಾರಾಗಿದ್ದು ಹೇಗೆ?” ಎಂದು ಪ್ರಶ್ನಿಸಿದರು.


Share this with Friends

Related Post